

ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಏಳು ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಇಂದು ಅಮಾನತು ಮಾಡಿದರು.
ಗೌರವ್ ಗೊಗೊಯಿ, ಟಿ.ಎನ್.ಪ್ರತಾಪನ್, ಮಾಣಿಕಂ ಟಾಗೋರ್, ಗುರ್ಜೀತ್ ಸಿಂಗ್ ಔಜಲಾ, ಬೆನ್ನಿ ಬೆಹಾನನ್, ರಾಜಮೋಹನ್ ಉನ್ನಿತಾನ್ ಮತ್ತು ಡೀನ್ ಕುರಿಯಾಕೋಸ್ ಅವರು ಸದನದಲ್ಲಿ ಅಶಿಸ್ತಿನಿಂದ ವರ್ತನೆ ಮಾಡಿದ ಕಾರಣ ಅವರನ್ನು ಅಮಾನತು ಮಾಡಲಾಗಿದೆ.
ಸಂಸದರ ಅಮಾನತು ಆದೇಶವನ್ನು ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಪಾಸ್ ಮಾಡಲಾಯಿತು. ನಿನ್ನೆ ಬುಧವಾರ ಕೂಡ ಪ್ರತಿಪಕ್ಷಗಳು ದೆಹಲಿ ಹಿಂಸಾಚಾರದ ಬಗ್ಗೆ ಇವತ್ತೇ ಚರ್ಚೆ ನಡೆಸಬೇಕು ಎಂದು ಒತ್ತಾಯಿಸುತ್ತ ಕಲಾಪಕ್ಕೆ ಅಡ್ಡಿ ಪಡಿಸಿದ್ದರು. ಇಂದು ಬೆಳಗ್ಗೆಯೂ ಇದೇ ವಿಚಾರ ಮುನ್ನೆಲೆಗೆ ಬಂತು.
ಸಂಸದರ ಅಮಾನತು ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಈ ನಿರ್ಧಾರ ಸ್ಪೀಕರ್ದಲ್ಲ, ಸರ್ಕಾರದ್ದು. ಹೀಗೆ ಅಮಾನತು ಮಾಡಿದ್ದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಸಂಸತ್ತಿನ ಒಳಗೂ, ಹೊರಗೂ ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ದೆಹಲಿ ಹಿಂಸಾಚಾರದ ಬಗ್ಗೆ ತಕ್ಷಣವೇ ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಕೇಂದ್ರ ಸರ್ಕಾರ ಹೋಳಿ ಹಬ್ಬದ ನಂತರ ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುತ್ತೇವೆ ಎಂದು ಹೇಳಿದೆ. (ಏಜೆನ್ಸೀಸ್)