ನೀರಿನ ತೊಟ್ಟಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 69 ಹಾವಿನ ಮರಿಗಳು ಪತ್ತೆ.. Shivamogga

shimogga snake video
Published on

ಶಿವಮೊಗ್ಗ: ಶಿವಮೊಗ್ಗ ( Shivamogga) ಕಾಶಿಪುರ ಬಡಾವಣೆಯ ಮನೆಯೊಂದರ ನೀರಿನ ತೊಟ್ಟಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 69 ಹಾವಿನ ಮರಿಗಳು ಪತ್ತೆಯಾಗಿವೆ.

ಉರಗ ಸಂರಕ್ಷಕ ಸ್ನೇಕ್ ಕಿರಣ್ ಸತತ ಎರಡು ದಿನ ಕಾರ್ಯಾಚರಣೆ ನಡೆಸಿ ಎಲ್ಲ ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ. ಕಾಶೀಪುರ ಬಡಾವಣೆಯ ಪಶುವೈದ್ಯಕೀಯ ಕಾಲೇಜು ರಸ್ತೆಯ ಎಸ್.ಈಶ್ವರಯ್ಯ ಎಂಬುವರ ಮನೆಯ ನೀರಿನ ತೊಟ್ಟಿಯಲ್ಲಿ ಹಾವಿನ ಮರಿಗಳು ಪತ್ತೆಯಾಗಿವೆ.

ಶನಿವಾರ ನೀರಿನ ತೊಟ್ಟಿಯ ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ನೀರಿನ ತೊಟ್ಟಿಯ ಬಾಗಿಲು ತೆರೆದು ಪರಿಶೀಲಿಸಿದಾಗ ನೀರಿನೊಳಗೆ ಸಾಕಷ್ಟು ಸಂಖ್ಯೆಯ ಹಾವಿನ ಮರಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಇದರಿಂದ ಭಯಭೀತರಾದ ಕುಟುಂಬಸ್ಥರು ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಭಾರೀ ಸಂಖ್ಯೆಯ ಹಾವಿನ ಮರಿಗಳಿದ್ದವು. ಶನಿವಾರವೇ 63 ಹಾವಿನ ಮರಿಗಳನ್ನು ರಕ್ಷಿಸಿದ್ದರು. ಭಾನುವಾರ ರಾತ್ರಿ ಮತ್ತೆ ಅದೇ ನೀರಿನ ಟ್ಯಾಂಕ್‌ನಲ್ಲಿ ಮತ್ತಷ್ಟು ಹಾವಿನ ಮರಿಗಳು ಕಂಡುಬಂದಿದ್ದವು.ಮತ್ತೆ ಸ್ಥಳಕ್ಕಾಗಮಿಸಿದ ಕಿರಣ್ 6 ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ. ನೀರು ಹಾವು ವಿಷರಹಿತ ವರ್ಗಕ್ಕೆ ಸೇರಿದ್ದಾಗಿದ್ದು, ಇವುಗಳು ಕಚ್ಚಿದರೂ ಯಾವುದೇ ಅಪಾಯವಾಗುವುದಿಲ್ಲ ಎಂದು ಕಿರಣ್ ತಿಳಿಸಿದರು.

ಹಾವಿನ ಮರಿಗಳನ್ನು ನಿರ್ಜನ ಪ್ರದೇಶದ ನೀರಿನ ಸೆಲೆಯಿರುವ ಸ್ಥಳದಲ್ಲಿ ಬಿಡಲಾಗಿದೆ. ಕಾರ್ಯಾಚರಣೆ ವೇಳೆ ಹಾವಿನ ಮರಿಗಳ ತಾಯಿ ಸುಳಿವು ಪತ್ತೆಯಾಗಿಲ್ಲ. ತಾವು ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ ಎಂದು ಹೇಳಿದರು.

ಪ್ರಸ್ತುತ ಬೇಸಿಗೆ ಸಮಯವಾಗಿರುವ ಕಾರಣದಿಂದ ತಣ್ಣನೆ ವಾತಾವರಣದಲ್ಲಿ ನೀರಿನ ಹಾವುಗಳು ಕಂಡುಬರುತ್ತವೆ. ಹಾವುಗಳು ಜೀವ ಸಂಕುಲದ ಅಪರೂಪದ ಜೀವಿಗಳಾಗಿವೆ. ಯಾವುದೇ ಕಾರಣಕ್ಕೂ ಅವುಗಳನ್ನು ಸಾಯಿಸಬೇಡಿ. ಜನವಸತಿ ಪ್ರದೇಶಗಳ ಬಳಿ ಕಂಡುಬಂದ ವೇಳೆ ತಮಗೆ ಮಾಹಿತಿ ನೀಡಿದರೆ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲಾಗುವುದು ಎಂದು ನಾಗರೀಕರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net