

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ 60 ಪರ್ಸೆಂಟ್ ಕಮೀಶನ್ ಸುಲಿಗೆ ಮಾಡುತ್ತಿದೆ ಎಂದು ಮತ್ತೆ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ದಾಖಲೆ ಕೊಡಿ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು(60 percent commission; Hit and Run CM) ನೀಡಿದ್ದಾರೆ.
60 ಪರ್ಸೆಂಟ್ ಕಮೀಶನ್ ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮುಖ್ಯಮಂತ್ರಿಗಳೆ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಮುಖಂಡರೇ ಮಾಡಿರುವ ಆರೋಪವಿದು. ನಮ್ಮ ಪಕ್ಷದ ಸರ್ಕಾರಕ್ಕಿಂತ ಹಿಂದಿನ ಬಿಜೆಪಿ ಸರ್ಕಾರವೇ ವಾಸಿ ಇತ್ತು ಎಂದು ಅಲವತ್ತುಕೊಂಡಿದ್ದರು! ಕಾಂಗ್ರೆಸ್ ಸರ್ಕಾರದಲ್ಲೂ 40 ಪರ್ಸೆಂಟ್ ಕಮೀಶನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರವಾಗಿ ಆರೋಪ ಎಂದು ಟಾಂಗ್ ನೀಡಿದ್ದಾರೆ.
ಕಮೀಶನ್ ವ್ಯವಹಾರ ಇಲ್ಲ ಎಂದಾದರೆ, ‘ಯಾಕಪ್ಪಾ ಹಾಗೆ ಹೇಳಿದಿರಿ?’ ಎಂದು ಅವರನ್ನೇ ಕರೆದು ಕೇಳಬೇಕಿತ್ತು. ಕೇಳಲಿಲ್ಲ ಯಾಕೆ? ಪ್ರತಿ ಆರೋಪಕ್ಕೂ ಈಗ ದಾಖಲೆ ಕೇಳುವ ನೀವು, ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮೀಶನ್ ಆರೋಪ ಮಾಡಿ, ಪುಟಗಟ್ಟಲೇ ಜಾಹೀರಾತು ಕೊಟ್ಟರಲ್ಲ, ಆಗ ಎಷ್ಟು ದಾಖಲೆ ನೀಡಿದ್ದೀರಿ? ನಿಮ್ಮ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದೀರಾ? ಎಂದು ಕೇಳಿದ್ದಾರೆ.
ದಾವಣಗೆರೆ ಗುತ್ತಿಗೆದಾರನೊಬ್ಬ ದಯಾಮರಣ ಕರುಣಿಸಿ ಎಂದು ನಿಮ್ಮ ಘನ ಸನ್ನಿಧಾನಕ್ಕೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರಿಗೆ ಬಾಕಿ ಹಣ ಕೊಡಿಸುತ್ತೀರೋ ಅಥವಾ ದಯಾಮರಣ ಕರುಣಿಸುತ್ತೀರೊ? ಎಂದು ವ್ಯಂಗ್ಯವಾಡಿರುವ ಕುಮಾರಸ್ವಾಮಿ, ಕಮೀಶನ್ ದುರಾಸೆ ಬಿಟ್ಟು ಮೊದಲು ಆ ಗುತ್ತಿಗೆದಾರನನ್ನು ರಕ್ಷಿಸಿ ಎಂದು ಒತ್ತಾಯಿಸಿದ್ದಾರೆ.
60ಪರ್ಸೆಂಟ್ ಕಮೀಶನ್! ಮುಖ್ಯಮಂತ್ರಿ ಹಿಟ್ ಅಂಡ್ ರನ್!! ಎಂದು ಸಿಎಂಗೆ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.