

ಬೆಂಗಳೂರು: ಎರಡು ಪ್ರತೇಕ ಪ್ರಕರಣದಲ್ಲಿ ಇಬ್ಬರಿಗೆ ಅಧಿಕ ಲಾಭಾಂಶ ನೀಡುವುದಾಗಿ ಆಸೆ ತೋರಿಸಿ ಸೈಬರ್ ವಂಚಕರು ೬೦ ಲಕ್ಷ ರೂ.ವಂಚಿಸಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬನಶಂಕರಿ ೧ನೇ ಹಂತದ ಎಸ್‌ಬಿಎಂ ಕಾಲನಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್ ಬಗ್ಗೆ ಬಂದ ಜಾಹೀರಾತನ್ನು ನೋಡಿದ್ದು, ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ ನಂತರ ಶೇರ್ ಇಂಡಿಯಾ ಸೆಕ್ಯೂರಿಟಿ ಡಿಸ್ಕಷನ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದು ನಂತರ ಮಹಿಳೆಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಬ್ಲಾಕ್ ಟ್ರೇಡಿಂಗ್ ಮತ್ತು ಐಪಿಒ ಇನ್ವೆಸ್ಟ್‌ಮೆಂಟ್ ಮಾಡಲು ತಿಳಿಸಿದ್ದು, ಷೇರ್ ಇಂಡಿಯಾ ಎಂಬ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಸಿ, ಆ ಅಪ್ಲಿಕೇಷನ್‌ನಲ್ಲಿ ಇನ್ವೆಸ್ಟ್‌ಮೆಂಟ್ ಮಾಡಲು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ವಂಚಕರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ೫೮,೫೦,೦೩೧ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ನಂತರ ಆ ಅಪ್ಲಿಕೇಷನ್‌ನಲ್ಲಿ ಪ್ರಾಫಿಟ್ ತೊರಿಸಿದ್ದು, ಆ ಹಣವನ್ನು ಮಹಿಳೆ ವಿಥ್ ಡ್ರಾ ಮಾಡಲು ಕೇಳಿದಾಗ ಇನ್ನು ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ತಿಳಿಸಿದ್ದು, ಮಹಿಳೆಗೆ ಯಾವುದೇ ಲಾಭಾಂಶವನ್ನು ನೀಡದೆ ಮೋಸ ಮಾಡಿದ್ದಾರೆ. ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ಎನ್‌ಸಿಆರ್‌ಪಿ ಪೋರ್ಟಲ್ ಪ್ರಾಥಮಿಕ ದೂರು ನೀಡಿದ್ದಾರೆ. ಆ ಬಳಿಕ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
೨.೨೯ ಲಕ್ಷ ರೂ.ವಂಚನೆ
ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ೨.೨೯ ಲಕ್ಷ ರೂ. ವಂಚಿಸಿದ್ದಾರೆ. ಎಟಿಪಿ ಲಾಲ್ ಬಹದ್ದೂರ್ ಶಾಸಿನಗರದ ನಿವಾಸಿ ರಾಕೇಶ್ ಕುಮಾರ್ ಎಂಬುವರಿಗೆ ವಾಟ್ಸ್‌ಆ್ಯಪ್ ನಂಬರ್‌ಗೆ ಮೆಸೇಜ್ ಒಂದು ಬಂದಿದ್ದು ಅದರಲ್ಲಿ ಇನ್ವೆಷ್ಟ್‌ಮೆಂಟ್ ಬಗ್ಗೆ ಹೇಳಲಾಗಿತ್ತು. ನಂತರ ಟೆಲಿಗ್ರಾಮ್ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದಾರೆ. ಅದರಲ್ಲಿ ವಿವಿಧ ರೀತಿಯ ರಿವ್ಯೆ ನೀಡಿ ಮೊದಲು ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ. ನಂತರ ವಂಚಕರು ನೀಡಿದ್ದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ೨,೨೯,೯೯೮ ರೂ.ಗಳು ಹೂಡಿಕೆ ಮಾಡಿಸಿಕೊಂಡಿದ್ದಾರೆ. ನಂತರ ದೂರುದಾರರು ಹಣ ಡ್ರಾ ಮಾಡಲು ಪ್ರಯತ್ನಿಸಿದ್ದಾಗ ಹಣವನ್ನು ಪಡೆಯದ ಹಾಗೆ ಬ್ಲಾಕ್ ಮಾಡಲಾಗಿತ್ತು. ತಾನು ಮೋಸ ಹೋಗಿರುವುದನ್ನು ಅರಿತ ರಾಕೇಶ್ ಕುಮಾರ್ ೧೯೩೦ ಗೆ ಕರೆ ಮಾಡಿ ದೂರು ದಾಖಲಿಸಿದ್ದು, ನಂತರ ಸಿಇಎನ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.