'ದಳಪತಿ' ನೋಡುವ ಕಾತರದಲ್ಲೇ ಆಸ್ಪತ್ರೆ ಪಾಲಾದ 6ಕ್ಕೂ ಹೆಚ್ಚು ಫ್ಯಾನ್ಸ್​! ಸಮಾವೇಶದಲ್ಲಿ ಕಾಡಿದ ವ್ಯವಸ್ಥೆಯ ಕೊರತೆ | Vijay

vijay
Published on

ಚೆನ್ನೈ: 2026ರಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಜನಸೇವೆ ಮಾಡಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ತಮಿಳು ನಟ, ದಳಪತಿ ವಿಜಯ್ (Thalapathy Vijay)​ ಇಂದು ರಾಜ್ಯದ ವಿಕ್ರವಾಂಡಿಯಲ್ಲಿ ಸಾರ್ವಜನಿಕ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಪ್ರಾರಂಭಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಈ ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿದ್ದು, ಬಿರು ಬಿಸಿಲಿನ ನಡುವೆಯೇ ಅಭಿಮಾನಿಗಳು ನಟನನ್ನು ಕಣ್ತುಂಬಿಕೊಂಡಿದ್ದಾರೆ.

ಅಪಾರ ಸಂಖ್ಯೆಯಲ್ಲಿ, ನಿರೀಕ್ಷೆಗೂ ಮೀರಿದ ಜನರು ಸಮಾವೇಶಕ್ಕೆ ಆಗಮಿಸಿ, ನಟನ ರಾಜಕೀಯ ಪ್ರವೇಶವನ್ನು ಕೊಂಡಾಡಿದ್ದೇ ಆದರೂ ಸುಡುವ ಬಿಸಿಲಿನ ಆರ್ಭಟಕ್ಕೆ ತತ್ತರಿಸಿದ್ದು, ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಬಿಸಿಲಿನಲ್ಲಿ ನಿಂತಿದ್ದ ಅಭಿಮಾನಿಗಳು ಕುಡಿಯುವ ನೀರಿಗಾಗಿ ಪರದಾಡಿದ್ದು, ನೀರಿನ ಅಭಾವ ಹಾಗೂ ಬಿಸಿಲ ತಾಪದಿಂದ ಬಳಲಿ ಆಸ್ಪತ್ರೆ ಪಾಲಾಗಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಕನಿಷ್ಠ ಆರು ಜನರನ್ನು ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಮತ್ತು ಪಕ್ಷದ ಸ್ವಯಂಸೇವಕರಿಗೆ ಕುಡಿಯುವ ನೀರು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗಿಲ್ಲ ಎಂಬ ವರದಿಗಳು ಇದೀಗ ಮುನ್ನೆಲೆಗೆ ಬಂದಿವೆ. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನಸಾಗರವನ್ನು ನಿಯಂತ್ರಿಸುವಲ್ಲಿ ಖಾಕಿ ಪಡೆ ಭಾರೀ ಹರಸಾಹಸ ಪಟ್ಟಿರುವುದು ದೃಶ್ಯಗಳಲ್ಲಿ ಕಂಡುಬಂದಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net