6 ಹೊಸ ಅಣುಸ್ಥಾವರ ಚರ್ಚೆ: ಪುತಿನ್-ಮೋದಿ ಮಹತ್ವದ ಚರ್ಚೆ

modi
Published on

ಮಾಸ್ಕೋ: ‘ಆರು ಅಣು ವಿದ್ಯುತ್ ಸ್ಥಾವರ, ನೂರು ಶತಕೋಟಿ ಡಾಲರ್ ಹೊಸ ವ್ಯಾಪಾರದ ಗುರಿ, ರಾಷ್ಟ್ರೀಯ ಕರೆನ್ಸಿ ಮೂಲಕ ದ್ವಿಪಕ್ಷೀಯ ಪಾವತಿ ವ್ಯವಸ್ಥೆ ಉತ್ತೇಜನ..’ - ಇವು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಧ್ಯೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಬಹುಮುಖ್ಯ ಸಂಗತಿಗಳು. ರಷ್ಯಾದ ಮಾಸ್ಕೋದಲ್ಲಿ ಎರಡು ದಿನ ನಡೆದ 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ದ್ವಿಪಕ್ಷೀಯ ಮಾತುಕತೆಯಲ್ಲಿ ಮೋದಿ-ಪುತಿನ್ ಈ ವಿಷಯಗಳನ್ನು ಪ್ರಮುಖವಾಗಿ ರ್ಚಚಿಸಿದ್ದಾರೆ.

ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಕುರಿತು ಮಾತುಕತೆ ನಡೆಸಿದ ಉಭಯ ನಾಯಕರು 2023ರಲ್ಲಿನ ಗಣನೀಯ ಪ್ರಗತಿ 2025ರ 30 ಶತಕೋಟಿ ಡಾಲರ್ ಗುರಿ ದುಪ್ಪಟ್ಟಾಗಿಸಿದ್ದನ್ನು ಉಲ್ಲೇಖಿಸಿದರು.

ದೀರ್ಘಾವಧಿಯಲ್ಲಿ ಸಮತೋಲಿತ ಮತ್ತು ಸುಸ್ಥಿರ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸಲು ಕೈಗಾರಿಕಾ ಸಹಕಾರ ಬಲಪಡಿಸುವ ಮೂಲಕ ರಷ್ಯಾಕ್ಕೆ ಭಾರತೀಯ ರಫ್ತುಗಳನ್ನು ಹೆಚ್ಚಿಸುವ ಅಗತ್ಯವನ್ನು ನಾಯಕರು ಒತ್ತಿಹೇಳಿದರು. ಅದರಲ್ಲೂ ವಿಶೇಷವಾಗಿ ಸುಧಾರಿತ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ತಾಂತ್ರಿಕ ಮತ್ತು ಹೂಡಿಕೆ ಪಾಲುದಾರಿಕೆಗಳನ್ನು ರೂಪಿಸುವುದು, ಹೊಸ ಮಾರ್ಗಗಳು ಮತ್ತು ಸಹಕಾರದ ರೂಪಗಳನ್ನು ಕಂಡುಹಿಡಿಯುವ ಕುರಿತು ರ್ಚಚಿಸಿದರು. ಅಲ್ಲದೆ, ದ್ವಿಪಕ್ಷೀಯ ವ್ಯಾಪಾರದ ಪ್ರಗತಿ ಇನ್ನಷ್ಟು ಸುಸ್ಥಿರಗೊಳಿಸಲು ಮತ್ತು ಉತ್ತೇಜಿಸಲು 2030ರ ವೇಳೆಗೆ ನೂರು ಶತಕೋಟಿ ಡಾಲರ್ ವ್ಯಾಪಾರದ ಗುರಿ ಇರಿಸಿಕೊಂಡರು ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ವ್ಯಾಪಾರ ಮತ್ತು ಆರ್ಥಿಕ ಸಹಕಾರ ಗಾಢವಾಗಿಸಲು ಪ್ರೋಗ್ರಾಂ-2030ರ ವರೆಗೆ ರಷ್ಯಾ-ಭಾರತದ ಆರ್ಥಿಕ ಸಹಕಾರದ ಭರವಸೆಯ ಕ್ಷೇತ್ರಗಳ ಅಭಿವೃದ್ಧಿಗೆ ಕಾರ್ಯಕ್ರಮ ಸಿದ್ಧಪಡಿಸಲು ಸಂಬಂಧಿತ ಸಂಸ್ಥೆಗಳಿಗೆ ಸೂಚನೆ ನೀಡಿದರು. ಅಲ್ಲದೆ, ರಾಷ್ಟ್ರೀಯ ಕರೆನ್ಸಿಗಳನ್ನು ಬಳಸಿಕೊಂಡು ದ್ವಿಪಕ್ಷೀಯ ವ್ಯವಸ್ಥೆಯ ಉತ್ತೇಜನಕ್ಕಾಗಿ ಮುಂದುವರಿಯುವ ಬಗ್ಗೆಯೂ ಉಭಯ ನಾಯಕರು ಸಮ್ಮತಿಸಿದರು. ರಕ್ಷಣಾತ್ಮಕ ಕ್ರಮಗಳು, ಆಡಳಿತಾತ್ಮಕ ಅಡೆತಡೆಗಳು ಸೇರಿದಂತೆ ವ್ಯಾಪಾರದಲ್ಲಿನ ಸುಂಕರಹಿತ ಮತ್ತು ಸುಂಕದ ಅಡೆತಡೆಗಳನ್ನು ತೆಗೆದುಹಾಕಲು ಭಾರತ ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟದ ನಡುವಿನ ಸರಕುಗಳ ಮೇಲೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಸಂಪೂರ್ಣ ಮಾತುಕತೆ ಪ್ರಾರಂಭಿಸಲು 2024ರ ಮಾರ್ಚ್​ನಲ್ಲಿನ ಆರಂಭಿಕ ಸಭೆಯನ್ನು ಶ್ಲಾಘಿಸಿದರು. ಸೇವೆ-ಹೂಡಿಕೆಗಳಲ್ಲಿ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾತುಕತೆಗಳ ಸಾಧ್ಯತೆ ಅನ್ವೇಷಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದರು.

ಹೊಸ ವಿದ್ಯುತ್ ಯೋಜನೆ :ಭಾರತದಲ್ಲಿ ಇನ್ನೂ ಆರು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲಾಗುವುದು ಎಂದು ರಷ್ಯನ್ ಸ್ಟೇಟ್ ನ್ಯೂಕ್ಲಿಯರ್ ಕಾರ್ಪೆರೇಷನ್ ರೊಸ್ಯಾಟಮ್ ಹೇಳಿದೆ. ಎಲ್ಲ ಆರು ಅಣು ವಿದ್ಯುತ್ ಸ್ಥಾವರಗಳು ರಷ್ಯನ್ ತಂತ್ರಜ್ಞಾನದಲ್ಲಿ ನಿರ್ವಣವಾಗಲಿದ್ದು, ಅವುಗಳಿಗೆ ಉಪಕರಣಗಳನ್ನು ರೊಸ್ಯಾಟಮ್ ಪೂರೈಸಲಿದೆ. ತಮಿಳುನಾಡಿನ ಕೂಡಂಕುಲಂ ಅಣು ಶಕ್ತಿ ಯೋಜನೆ ಭಾರತದ ಮೊದಲ ಎರಡು ಅಣು ವಿದ್ಯುತ್ ಸ್ಥಾವರಗಳಾಗಿದ್ದು, ಇವು 2 ದಶಕಗಳ ಹಿಂದೆ ಸೋವಿಯತ್ ವಿನ್ಯಾಸದ ವಿವಿಇಆರ್-1000 ರಿಯಾಕ್ಟರ್​ಗಳನ್ನು ಒಳಗೊಂಡು ರಷ್ಯಾ-ಭಾರತ ಯೋಜನೆಯ ಭಾಗವಾಗಿ ನಿರ್ವಣಗೊಂಡಿದ್ದವು.

ಭಾರತೀಯರು ಶೀಘ್ರ ವಾಪಸ್: ರಷ್ಯಾದ ಸೇನೆಗೆ ನೇಮಕಗೊಂಡಿ ರುವ ಭಾರತೀಯರನ್ನು ವಾಪಸ್ ಕಳಿಸುವ ಕುರಿತ ಭಾರತದ ಕರೆಗೆ ರಷ್ಯಾ ಸರ್ಕಾರ ಸ್ಪಂದಿಸಿದ್ದು, ಸಮಸ್ಯೆ ಶೀಘ್ರ ಪರಿಹರಿಸುವ ಭರವಸೆ ನೀಡಿದೆ. ಭಾರತೀಯರ ನೇಮಕ ಕೇವಲ ವಾಣಿಜ್ಯಿಕ ವಿಷಯ ಅವರು ಸೇನೆಯ ಭಾಗವಾಗಿರಲು ಎಂದಿಗೂ ಬಯಸುವುದಿಲ್ಲ. ಸಂಘರ್ಷದ ಸಂದರ್ಭದಲ್ಲಿ ಅವರ ಸಂಖ್ಯೆ ಅತ್ಯಲ್ಪ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಬಗ್ಗೆ ಅಮೆರಿಕಕ್ಕೂ ವಿಶ್ವಾಸ: ಯೂಕ್ರೇನ್ ಮೇಲೆ ರಷ್ಯಾ ನಡೆಸಿದ್ದ ದಾಳಿಯನ್ನು ಭಾರತ ಇನ್ನೂ ಖಂಡಿಸಿಲ್ಲ. ಅದಾಗ್ಯೂ ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಸಂಘರ್ಷ ಪರಿಹರಿಸುವ ಕುರಿತು ಅದು ಪ್ರಸ್ತಾಪಿಸಿದೆ ಎಂದು ರಷ್ಯಾದಲ್ಲಿನ ಮೋದಿ ನಡೆಗೆ ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ. ಮೋದಿಯವರ ರಷ್ಯಾ ಭೇಟಿ ಕುರಿತು ವೈಟ್​ಹೌಸ್ ವಕ್ತಾರೆ ಕರೈನ್ ಜೀನ್ ಪೀರೆ ಅವರನ್ನು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಕೇಳಿದಾಗ ಅವರು ಈ ಪ್ರತಿಕ್ರಿಯೆ ನೀಡಿದ್ದರು. ಯುಕ್ರೇನ್​ನಲ್ಲಿನ ರಷ್ಯಾದ ಅಪ್ರಚೋದಿತ ಯುದ್ಧ ಕೊನೆಗೊಳಿಸಲು ಒತ್ತಾಯಿಸುವಲ್ಲಿ ರಷ್ಯಾದೊಂದಿಗಿನ ಭಾರತದ ದೀರ್ಘಕಾಲದ ಸಂಬಂಧ ಸಾಮರ್ಥ್ಯ ನೀಡುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.

ಆಸ್ಟ್ರಿಯಾದಲ್ಲಿ ಶಾಂತಿ ಮಂತ್ರ: ಬಾಂಬ್-ಬಂದೂಕುಗಳ ಮಧ್ಯೆ ಶಾಂತಿಯ ಮಾತುಕತೆ ಫಲಿಸುವುದಿಲ್ಲ ಎಂದು ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಭೇಟಿ ವೇಳೆ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆಸ್ಟ್ರಿಯಾದಲ್ಲೂ ಮತ್ತೆ ಶಾಂತಿ ಮಂತ್ರ ಪಠಿಸಿದ್ದಾರೆ. ರಷ್ಯಾದಿಂದ ಆಸ್ಟ್ರಿಯಾಗೆ ಆಗಮಿಸಿದ ಪ್ರಧಾನಿ, ಆಸ್ಟ್ರಿಯನ್ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜತೆ ಮಾತುಕತೆ ನಡೆಸಿದರು. ಎರಡು ದಿನಗಳ ಭೇಟಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪ್ರಧಾನಿ ಆಸ್ಟ್ರಿಯಾಗೆ ಆಗಮಿಸಿದ್ದು, ಇದು ಕಳೆದ 40 ವರ್ಷಗಳಲ್ಲಿ ಆಸ್ಟ್ರಿಯಾಗೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ. ಆಸ್ಟ್ರಿಯಾದಲ್ಲಿ ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ, ಯೂಕ್ರೇನ್​ನ ಸಂಘರ್ಷ ಒಳಗೊಂಡಂತೆ ಜಗತ್ತಿನಲ್ಲಿ ನಡೆಯುತ್ತಿರುವ ವಿವಾದಗಳ ಕುರಿತು ಕಾರ್ಲ್ ನೆಹಮ್ಮರ್ ಜತೆ ಮಾತುಕತೆ ನಡೆಸಿದ್ದು, ‘ಇದು ಯುದ್ಧದ ಸಮಯವಲ್ಲ’ ಎಂದು ಈ ಫಲಪ್ರದ ಚರ್ಚೆಯಲ್ಲಿ ತಿಳಿಸಿದ್ದಾಗಿ ಮೋದಿ ಹೇಳಿಕೊಂಡಿದ್ದಾರೆ.

ಪರಸ್ಪರ ಸಹಕಾರವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ನಾವು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ನೀಲನಕಾಶೆ ಕೆಲವೇ ವರ್ಷಗಳಲ್ಲಿ ಸಿದ್ಧವಾಗಲಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಭಾರತ-ಆಸ್ಟ್ರಿಯಾ ಒತ್ತು ನೀಡುತ್ತಿದ್ದು ಅದಕ್ಕಾಗಿ ಅಗತ್ಯ ಬೆಂಬಲ ನೀಡಲು ಸಿದ್ಧ ಎಂದ ಅವರು, ಸಮಸ್ಯೆಗಳಿಗೆ ಪರಿಹಾರವನ್ನು ಯುದ್ಧಭೂಮಿಯಲ್ಲಿ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net