

ನವದೆಹಲಿ: ಕೊವಿಡ್-19 ಮಹಾಮಾರಿಗೆ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಜಾರ್ಖಂಡದ ಧನ್ಬಾದ್ ಜಿಲ್ಲೆಯ ಕತ್ರಸ್ನಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಆಕೆಯ ಐದು ಜನ ಗಂಡುಮಕ್ಕಳು ಕೊವಿಡ್-19ನಿಂದ ಮೃತಪಟ್ಟಿದ್ದಾರೆ.
ಮಹಿಳೆಗೆ 88 ವರ್ಷ. ಇವರು ಒಂದು ಮದುವೆಗಾಗಿ ದೆಹಲಿಯಿಂದ ಧನಬಾದ್ಗೆ ಆಗಮಿಸಿದ್ದರು. ಆದರೆ ಇಲ್ಲಿಗೆ ಬರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಬೊಕಾರೋದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಅವರ ಸಾವಿನ ಬಳಿಕ ಕರೊನಾ ಟೆಸ್ಟ್ಗೆ ಒಳಪಡಿಸಲಾಗಿತ್ತು. ಆದರೆ ರಿಪೋರ್ಟ್ ಬರುವುದಕ್ಕೂ ಮೊದಲೇ ಐವರು ಪುತ್ರರು ಸೇರಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಇದನ್ನೂ ಓದಿ: ಚೀನಾದಲ್ಲಿ ಚಿತ್ರಮಂದಿರ ಓಪನ್; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!
ವರದಿಯಲ್ಲಿ ಕರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಐವರು ಪುತ್ರರನ್ನೂ ಟೆಸ್ಟ್ಗೆ ಒಳಪಡಿಸಲಾಗಿತ್ತು. ಅವರೂ ಕೂಡ ಎಲ್ಲರೂ 60-70 ವರ್ಷ ಆಸುಪಾಸಿನವರು. ವೈರಸ್ನಿಂದ ಪಾರಾಗಲು ಸಾಧ್ಯವಾಗದೆ, ಒಬ್ಬರ ಬಳಿಕ ಮತ್ತೊಬ್ಬರಂತೆ ಮೃತಪಟ್ಟಿದ್ದಾರೆ.
ಮಹಿಳೆಯ ಇನ್ನೊಬ್ಬ ಮಗ ದೆಹಲಿಯಲ್ಲಿ ಇದ್ದವರು ಸದ್ಯ ಪಾರಾಗಿದ್ದಾರೆ. (ಏಜೆನ್ಸೀಸ್)