ಮಾಚಿ ಸಚಿವರ ಗನ್‌ಮ್ಯಾನ್‌ನಿಂದ 6 ಲಕ್ಷ ರೂ. ವಂಚನೆ

Crime Logo
Published on

ಬೆಂಗಳೂರು: ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್‌ಮ್ಯಾನ್ ೩೦ ಕೋಟಿ ರೂ.ವೆಚ್ಚದ ಟೆಂಡರ್ ಕೊಡಿಸುವುದಾಗಿ ಕಂಟ್ರ್ಯಾಕ್ಟರ್‌ನನ್ನು ನಂಬಿಸಿ ೧೦ ಲಕ್ಷ ರೂ. ಪಡೆದು ವಂಚನೆ ನಡೆಸಿರುವ ಆರೋಪ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾವಣಗೆರೆ ಮೂಲದ ಕಂಟ್ರ್ಯಾಕ್ಟರ್ ಎಚ್.ರಾಜು ನಾಯ್ಕ ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ನಿವಾಸಿಯಾಗಿರುವ ಗನ್‌ಮ್ಯಾನ್ ರಾಘವೇಂದ್ರ(೪೫) ಅವರ ವಿರುದ್ಧ ಎ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಯಕೊಂಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ಟೆಂಡರ್ ಕೊಡಿಸುತ್ತೇನೆ ಎಂದು ನಂಬಿಸಿ ೩೦ ಕೋಟಿ ವೆಚ್ಚದ ಟೆಂಡರ್‌ಗೆ ಶೇ.೧೨ ಕಮಿಷನ್ ಕೇಳಿದ್ದ ಗನ್‌ಮ್ಯಾನ್ ಮುಂಗಡವಾಗಿ ೧೦ ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾನೆ ಎಂದು ರಾಜು ನಾಯ್ಕ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
೬ ಲಕ್ಷ ರೂ.ಕೊಡದೆ ವಂಚನೆ:
ಎಚ್.ರಾಜು ನಾಯ್ಕ ದಾವಣಗೆರೆ ಜಿಲ್ಲೆಯ ಶ್ರೀರಾಮನಗರ ಗ್ರಾಮದಲ್ಲಿ ೨೦೨೦-೨೧ ರಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವ ಸಂಬಂಧವಾಗಿ ಅನುದಾನ ಪಡೆಯಲು ಅಂದಿನ ಗಣಿ ಮತ್ತು ಭೂ ವಿಜ್ಞಾನ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರ ಸಬಲೀಕರಣ ಸಚಿವರಾಗಿದ್ದ ಹಾಲಪ್ಪ ಬಸಪ್ಪ ಆಚಾರ್ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಬಂದಿದ್ದಾಗ ಅವರ ಗನ್‌ಮ್ಯಾನ್ ಆಗಿದ್ದ ರಾಘವೇಂದ್ರ ಅವರ ಪರಿಚಯವಾಗಿದ್ದು, ಬಳಿಕ ರಾಘವೇಂದ್ರ ಅವರು ಮಾಯಗೊಂಡ ಕ್ಷೇತ್ರದ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ೩೦ ಕೋಟಿ ರೂ.ಕಾಮಗಾರಿ ಕೊಡಿಸುತ್ತೇನೆ ನನಗೆ ಶೇ.೧೨ ಕಮಿಷನ್ ಕೊಡಬೇಕೆಂದು ತಿಳಿಸಿದ್ದು, ಮುಂಗಡವಾಗಿ ೧೦ ಲಕ್ಷ ರೂ. ಹಣವನ್ನು ಕೊಡಬೇಕು ಎಂದು ಹೇಳಿ ೨೦೨೧ ರ ಅ.೩ ರಂದು ೫ ಲಕ್ಷ ರೂ. ಹಾಗೂ ಅ.೧೪ ರಂದು ೫ ಲಕ್ಷ ರೂ.ಗಳನ್ನು ರಾಘವೇಂದ್ರ ಅವರು ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಅಕೌಂಟ್‌ಗೆ ಹಣವನ್ನು ಹಾಕಿದ್ದಾರೆ. ಆದರೆ ಆರೋಪಿಯು ಕಾಮಗಾರಿಯನ್ನು ಕೊಡಿಸದೇ ಸತಾಯಿಸುತ್ತಿದ್ದಾನೆ. ನಂತರ ಹಣವನ್ನು ವಾಪಸ್ಸು ಕೇಳಿದ್ದಾಗ ರಾಜು ಅವರ ಸ್ನೇಹಿತೆಯಾದ ಶ್ವೇತಾ ಉಮಾಶಂಕರ ಅವರ ಖಾತೆಗೆ ೪ ಲಕ್ಷ ರೂ. ಹಣ ಹಾಕಿದ್ದು, ಉಳಿದ ೬ ಲಕ್ಷ ರೂ. ಹಣವನ್ನು ವಾಪಸ್ ಕೊಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ರಾಜು ನಾಯ್ಕ ಆ.೩೧ ರಂದು ಪ್ರಕರಣ ದಾಖಲಿಸಿದ್ದಾರೆ. ದೂರಿನನ್ವಯ ಎ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net