

ಮುಂಬೈ: ನಗರದ ಪ್ರಸಿದ್ಧ ತಾಜ್ ಮಹಲ್ ಟವರ್ ಹೋಟೆಲ್ನ ಆರು ಮಂದಿ ಉದ್ಯೋಗಿಗಳಿಗೆ ಕರೊನಾ ವೈರಸ್ ತಗುಲಿದ್ದು ದೃಢಪಟ್ಟಿದೆ ಎಂದು ಅಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ತಿಳಿಸಿದ್ದಾರೆ. ಹೋಟೆಲ್ ದಕ್ಷಿಣ ಮುಂಬೈನ ಕೊಲಾಬಾದಲ್ಲಿ ಇದೆ.
ತಾಜ್ ಹೋಟೆಲ್ಗಳನ್ನು ನಡೆಸುತ್ತಿರುವ ಇಂಡಿಯನ್ ಹೋಟೆಲ್ಸ್ ಕಂಪನಿಯೂ ಸಹ, ಕೆಲವು ಉದ್ಯೋಗಿಗಳಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದ್ದಾಗಿ ಹೇಳಿದೆ. ಆದರೆ ನಿಖರ ಸಂಖ್ಯೆಯನ್ನು ತಿಳಿಸಿಲ್ಲ.
ಮುಂಬೈನ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಇಂಡಿಯನ್ ಹೋಟೆಲ್ಸ್ ಕಂಪನಿಯು ತನ್ನ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಅವರಿಗೆ ಊಟಾಹಾರದ ವ್ಯವಸ್ಥೆಯನ್ನು ಮಾಡಿದೆ.
ತಾಜ್ ಪ್ಯಾಲೇಸ್, ತಾಜ್ ಲ್ಯಾಂಡ್ಸ್ ಎಂಡ್, ವಿವಾಂತಾ ಪ್ರೆಸಿಡೆಂಟ್ ಮತ್ತು ತಾಜ್ ಸಂತಾಕ್ರೂಜ್ಗಳನ್ನು ಈ ಸಂಸ್ಥೆ ನಡೆಸುತ್ತಿದೆ. ಎಲ್ಲ ಹೋಟೆಲ್ಗಳ ಉದ್ಯೋಗಿಗಳಲ್ಲೂ ಕರೊನಾ ಕಾಣಿಸಿಕೊಂಡಿದೆಯಾ? ಎಷ್ಟುಮಂದಿಗೆ ತಗುಲಿದೆ ಎಂಬುದು ಖಚಿತವಾಗಿಲ್ಲ. ಆದರೆ ವೈದ್ಯರು ನೀಡಿರುವ ವರದಿ ಅನ್ವಯ ಕೊಲಾಬಾದಲ್ಲಿರುವ ತಾಜ್ ಪ್ಯಾಲೇಸ್ನ ಆರು ಮಂದಿಯಲ್ಲಿ ಕರೊನಾ ದೃಢಪಟ್ಟಿದೆ.
ಸದ್ಯ ಅವರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಈ ಆರು ಮಂದಿಯ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ಈಗ ಗ್ರಾಹಕರಾಗಲಿ, ಅತಿಥಿಗಳಾಗಲೀ ಯಾರೂ ಇಲ್ಲ. ಕೆಲವೇ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. (ಏಜೆನ್ಸೀಸ್)