ಏನೋ ವಾಸನೆ ಬರುತ್ತಿದೆ ಎಂದು ನೀರಿನ ತೊಟ್ಟಿಯತ್ತ ನೋಡಿದ್ರೆ ಪ್ಲಾಸ್ಟಿಕ್​ ಕವರ್​ನಲ್ಲಿ 6 ದಿನದ ಮಗು ಶವ ಪತ್ತೆ!

death
Published on

ಹನೂರು: ಅಂಗವಿಕಲತೆಯ ಶಾಪಕ್ಕೆ ಅರಳಬೇಕಿದ್ದ ಹೂವನ್ನು ಮೊಗ್ಗಿನಲ್ಲೇ ಚಿವುಟಲಾಗಿದೆ. ಮಮತೆಯಿಂದ ಮಡಿಲಿನಲ್ಲಿಟ್ಟುಕೊಂಡು ಪ್ರೀತಿ, ವಾತ್ಸಲ್ಯ, ಮಮಕಾರ ತೋರುವ ಬದಲು ತಿಂದವರು ಎಲೆ ಬಿಸಾಡೋ ಹಾಗೆ ಹೆತ್ತವರು ಮಗುವನ್ನು ಎಸೆದು ಹೋಗಿದ್ದಾರೆ.

ಹನೂರು ತಾಲೂಕಿನ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯ ಶವಾಗಾರ ಬಳಿಯ ಖಾಲಿ ನೀರಿನ ತೊಟ್ಟಿಯಲ್ಲಿ 6 ದಿನದ ಹಸುಗೂಸು ಅನಾಥ ಶವವಾಗಿ ಪತ್ತೆಯಾಗಿದೆ. ಅಂಗವೈಕಲ್ಯ ಹೊತ್ತುಕೊಂಡು‌ ಜನಿಸಿರುವ ಕಾರಣ ಹೆತ್ತವರು ಪ್ಲಾಸ್ಟಿಕ್ ಕವರ್​ನಲ್ಲಿ ಮಗುವನ್ನು ಹಾಕಿ ಬಿಸಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಆಸ್ಪತ್ರೆ ಸಿಬ್ಬಂದಿ ಶವಾಗಾರದ ಬಳಿ ಹೋದಾಗ ದುರ್ನಾತ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್​ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ್ದರೆ ಕರುಳ ಬಳ್ಳಿ ಕತ್ತರಿಸಲಾಗಿರುತ್ತಿತ್ತು. ಆದರೆ ತೊಟ್ಟಿಯಲ್ಲಿ ಪತ್ತೆಯಾಗಿರುವ ಮಗುವಿನ ಕರುಳ ಬಳ್ಳಿಯನ್ನು ಕತ್ತರಿಸಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿಲ್ಲ ಎನ್ನಲಾಗುತ್ತಿದ್ದು, ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿ‌ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net