

ಪ್ರೀತಿಗೆ ಕಣ್ಣಿಲ್ಲ, ಕುರುಡು ಅನ್ನೋದಕ್ಕೆ ನಮ್ಮ ಸುತ್ತಮುತ್ತಲಿನ ಘಟನಗಳೇ ಜ್ವಲಂತ ಸಾಕ್ಷಿ. ವಿಚಿತ್ರ ಹಾಗೂ ಅಚ್ಚರಿಗೂ ಮೀರಿದ ಪ್ರೇಮ ಸಂಬಂಧಗಳನ್ನು ಕಂಡಾಗ, ಕೇಳಿದಾಗ ಎದುರಾಗುವ ಆಘಾತ ಅರಗಿಸಿಕೊಳ್ಳಲು ಬಹಳ ಸಮಯ ಬೇಕೇ ಬೇಕು. ವಯಸ್ಸಿಗೆ ಬಂದ ಮಕ್ಕಳು ಹೆತ್ತವರು ನಿಶ್ಚಯಿಸುವ ಮದುವೆಗೂ ಮುನ್ನವೇ ಪ್ರೀತಿಯಲ್ಲಿ ಬಿದ್ದು, ಅದರಲ್ಲಿ ಯಶಸ್ಸು ಸಾಧಿಸುವ ತವಕದಲ್ಲಿರುತ್ತಾರೆ. ಕೆಲವರು ಮನೆಯವರು ನೋಡಿದ ಹುಡುಗ-ಹುಡುಗಿಯನ್ನು ಒಪ್ಪದೆ ತಾವೇ ನೋಡಿಕೊಂಡವರ ಜತೆ ವಿವಾಹವಾಗುತ್ತಾರೆ. ಇದಕ್ಕೋಸ್ಕರ ಕುಟುಂಬಸ್ಥರನ್ನು ದೂರ ಮಾಡಿಕೊಳ್ಳಲು ಸಿದ್ಧರಿರುತ್ತಾರೆ. ಇಂತಹ ವಿಷಯಗಳಿಂದ ನೊಂದ ಪೋಷಕರು ತಲೆಮೇಲೆ ಕೈಹೊತ್ತು, ಕಣ್ಣೀರಿಡುತ್ತಾರೆ. ಇಂತಹ ಪ್ರಸಂಗಗಳನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಇಲ್ಲೊಂದು ಘಟನೆ ಬಹಳ ವಿಚಿತ್ರವಾಗಿದ್ದು, ಪ್ರೀತಿ ಕುರುಡು ಎಂಬುದಕ್ಕಿಂತ ಇಷ್ಟೊಂದು ಕುರುಡೇ ಎನಿಸಿದೆ.
ಮಕ್ಕಳ ಮದುವೆ ಮಾಡಬೇಕಿದ್ದ ಹೆತ್ತವರೇ ಓಡಿಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಎದೆ ಎತ್ತರಕ್ಕೆ ಬಂದುನಿಂತಿರುವ ಮಕ್ಕಳಾದವರು ಏನು ಮಾಡಬೇಕು? ಇಂತಹದ್ದೇ ಒಂದು ಶಾಕಿಂಗ್ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ವರದಿಯಾಗಿದೆ. ಇನ್ನೆರೆಡು ತಿಂಗಳಲ್ಲಿ ನಿಶ್ಚಯವಾಗಿದ್ದ ಮಕ್ಕಳ ಮದುವೆಯನ್ನು ಲೆಕ್ಕಿಸದೆ 10 ಮಕ್ಕಳ ತಂದೆಯೊಂದಿಗೆ ಮನೆಬಿಟ್ಟು ಓಡಿಹೋದ 6 ಮಕ್ಕಳ ತಾಯಿ, ಗುಟ್ಟಾಗಿ ಮದುವೆಯಾಗುವ ಮೂಲಕ ತಮ್ಮ ಪ್ರೇಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ತನ್ನ ಮಗನ ಅತ್ತೆಯೊಂದಿಗೆ ಊರುಬಿಟ್ಟು ಓಡಿಹೋದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಸ್ಪಿ ಆದೇಶದ ಮೇರೆಗೆ ಅವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಮ್ಮ ಮದುವೆ ನಿಶ್ಚಯ ಮಾಡಿದ್ದ ಪೋಷಕರೇ ಪರಸ್ಪರ ಪ್ರೀತಿಯಲ್ಲಿ ಬಿದ್ದು ಓಡಿ ಹೋಗಿರುವ ಘಟನೆ ತಿಳಿದು ಮಕ್ಕಳು ಭಾರೀ ಆಘಾತಕ್ಕೊಳಗಾಗಿದ್ದು, ತಮಗೆ ಗೊತ್ತಿದ್ದ ಸ್ಥಳಗಳಲ್ಲಿ ಹುಡುಕಿದ್ದಾರೆ. ಆದ್ರೆ, ಅವರಿಬ್ಬರು ಯಾರ ಕೈಗೂ ಸಿಗದಂತೆ ಪರಾರಿಯಾಗಿರುವುದು ಇದೀಗ ಆತಂಕ ಸೃಷ್ಟಿಸಿದೆ. ಎಸ್‌ಪಿ ಅಪರ್ಣಾ ಕೌಶಿಕ್ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದ್ದು, ಇಬ್ಬರು ಮಕ್ಕಳ ಪೋಷಕರನ್ನು ಹುಡುಕಿ ಅವರವರ ಕುಟುಂಬಸ್ಥರಿಗೆ ಒಪ್ಪಿಸುವುದು ಇದೀಗ ಪೊಲೀಸರ ಜವಾಬ್ದಾರಿಯಾಗಿದೆ. ಮಕ್ಕಳ ಖುಷಿಗೆ ಸಾಕ್ಷಿಯಾಗಬೇಕಿದ್ದ ಹೆತ್ತವರೇ ಮಕ್ಕಳ ಕಣ್ಣೀರಿಗೆ ಕಾರಣವಾಗಿರವುದು ಸ್ಥಳೀಯರ ಆಕ್ರೋಶ ಹೆಚ್ಚಿಸಿದೆ,(ಏಜೆನ್ಸೀಸ್).