೨೭ ರಿಂದ ೫ ಆಟಗಾರರ ಕೊಡವ ಹಾಕಿ ನಮ್ಮೆ

21mdka1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡವ ಕುಟುಂಬ ತಂಡಗಳ ನಡುವಿನ ೫ಎ ಸೈಡ್ ಹಾಕಿ ನಮ್ಮೆ ಅಕ್ಟೋಬರ್ ೨೭ ರಿಂದ ಪೊನ್ನಂಪೇಟೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೃತಕ ಹುಲ್ಲುಹಾಸಿನ ಹಾಕಿ ಮೈದಾನದಲ್ಲಿ ನಡೆಯಲಿದೆ. ಕೊಡವ ಹಾಕಿ ಅಕಾಡೆಮಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಈ ಹಾಕಿ ಪಂದ್ಯಾವಳಿಯಲ್ಲಿ ೧೧೩ ಕೊಡವ ಕುಟುಂಬ ತಂಡಗಳು ಸೆಣಸಾಟ ನಡೆಸಲಿವೆ.

ಕೊಡವ ಹಾಕಿ ಉತ್ಸವ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಜ್ಞಾಪಕಾರ್ಥ ವಿಶೇಷ ಹಾಕಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆ ಕಾಲಘಟ್ಟದಲ್ಲಿ ಮೃತಪಟ್ಟಿದ್ದ ಪಾಂಡಂಡ ಕುಟ್ಟಪ್ಪ ಅವರಿಗೆ ಗೌರವ ಸೂಚಿಸಲು ಸಾಧ್ಯವಾಗಿರಲಿಲ್ಲ. ಕುಟ್ಟಪ್ಪ ಅವರ ಪುತ್ರ ಪಾಂಡಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಕೊಡವ ಹಾಕಿ ಅಕಾಡೆಮಿಗೆ ನೂತನ ಪದಾಧಿಕಾರಿಗಳ ನೇಮಕಾತಿ ನಡೆದಿದ್ದು, ಹೊಸ ಸಮಿತಿ ವಿನೂತನ ಹಾಕಿ ಪಂದ್ಯಾವಳಿ ಆಯೋಜಿಸಿದೆ.

ಒಂದು ಕುಟುಂಬ ತಂಡದಲ್ಲಿ ೮ ಆಟಗಾರರಿಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ತರಬೇತುದಾರ, ವ್ಯವಸ್ಥಾಪಕರು ಇರುತ್ತಾರೆ. ೭.೩೦ ನಿಮಿಷದ ೨ ಅವಧಿಯ ಪಂದ್ಯ ಇದಾಗಿರುತ್ತದೆ. ಪುರುಷ- ಮಹಿಳೆಯರು ಒಂದು ಕುಟುಂಬ ತಂಡದಲ್ಲಿ ಆಟವಾಡಲು ಅವಕಾಶವಿದೆ. ಕೊಡವ ಹಾಕಿ ಉತ್ಸವದ ನೀತಿ- ನಿಯಮದಂತೆ ಈ ಹಾಕಿ ನಮ್ಮೆ ನಡೆಯಲಿದೆ.

ಅಕ್ಟೋಬರ್ ೨೭ ರಂದು ಬೆಳಗ್ಗೆ ೧೦.೩೦ ಗಂಟೆಗೆ ಹಾಕಿ ನಮ್ಮೆಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ ಚಾಲನೆ ನೀಡಲಿದ್ದಾರೆ. ಪ್ರಥಮ ದಿನ ಮಧ್ಯಾಹ್ನ ೧೨ ಗಂಟೆಯಿಂದ ಪಂದ್ಯಾವಳಿ ಪ್ರಾರಂಭವಾಗಲಿದೆ. ಪ್ರತಿನಿತ್ಯ ೮ ರಿಂದ ೧೨ ಪಂದ್ಯ ನಡೆಯಲಿವೆ. ನವೆಂಬರ್ ೬ ರಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ.

ಪ್ರಥಮ ಸ್ಥಾನ ಪಡೆಯುವ ಕುಟುಂಬ ತಂಡಕ್ಕೆ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಜ್ಞಾಪಕಾರ್ಥ ಅವರ ಪತ್ನಿ ಪಾಂಡಂಡ ಲಲಿತಾ ಕುಟ್ಟಪ್ಪ ೧ ಲಕ್ಷ ರೂಪಾಯಿ ನಗದು ಬಹುಮಾನ ನೀಡಿದ್ದಾರೆ. ದ್ವಿತೀಯ ಸ್ಥಾನ ಪಡೆಯುವ ಕುಟುಂಬ ತಂಡಕ್ಕೆ ಬಿದ್ದಾಟಂಡ ಎಸ್. ಪ್ರದೀಪ್ ಜ್ಞಾಪಕಾರ್ಥ ಅವರ ಪತ್ನಿ ಬಿದ್ದಾಟಂಡ ಸುಮನ್ ಪ್ರದೀಪ್ ೫೦ ಸಾವಿರ ರೂಪಾಯಿ ನಗದು ಬಹುಮಾನ ನೀಡಿದ್ದಾರೆ.

ಸೆಮಿಫೈನಲ್‌ನಲ್ಲಿ ಪರಾಭವಗೊಳ್ಳುವ ೨ ಕುಟುಂಬ ತಂಡಕ್ಕೆ ತಲಾ ೧೫ ಸಾವಿರ ರೂಪಾಯಿ ನಗದು ನೀಡಲಾಗುತ್ತದೆ. ಇದೇ ರೀತಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲುವ ೪ ಕುಟುಂಬ ತಂಡಕ್ಕೆ ತಲಾ ೫ ಸಾವಿರ ರೂಪಾಯಿ ನಗದು ನೀಡಲಾಗುತ್ತದೆ. ಹಾಕಿ ನಮ್ಮೆಯಲ್ಲಿ ಉತ್ತಮ ಆಟದ ಪ್ರದರ್ಶನ ನೀಡುವ ಆಟಗಾರರಿಗೆ ವೈಯುಕ್ತಿಕ ವಿಭಾಗದಲ್ಲಿ ವಿಶೇಷ ಬಹುಮಾನ ನೀಡಲಾಗುತ್ತದೆ.

ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಬಡಕಡ ದೀನ ಪೂವಯ್ಯ ಪಂದ್ಯಾವಳಿ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹಾಕಿ ಕೊಡಗು ತೀರ್ಪುಗಾರರು ಈ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ನವೆಂಬರ್ ೬ ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪದ್ಮಶ್ರಿ ಮೊಳ್ಳೇರ ಪಿ. ಗಣೇಶ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಕೊಡವ ಹಾಕಿ ಅಕಾಡೆಮಿ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

೫ಎ ಸೈಡ್ ಕೊಡವ ಹಾಕಿ ನಮ್ಮೆ ಆಯೋಜಿಸುವುದರ ಮೂಲಕ ಕೊಡಗಿನಲ್ಲಿ ಮತ್ತೊಮ್ಮೆ ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ ಭವಿಷ್ಯದಲ್ಲಿ ಸ್ವಂತ ಹಾಕಿ ಮೈದಾನ, ಕ್ರೀಡಾಂಗಣ ಹೊಂದುವ ಉದ್ದೇಶ ಇಟ್ಟುಕೊಂಡಿದೆ. ಅದರೊಂದಿಗೆ ಕೊಡವ ಹಾಕಿ ಆಟಗಾರರು ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಂತೆ ಮಾಡಲಾಗುವುದೆಂದು ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹೇಳುತ್ತಾರೆ.

ಕೊಡವ ಹಾಕಿ ನಮ್ಮೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಗಿನ್ನಿಸ್ ದಾಖಲೆ ಮಾಡುವಂತೆ ಮಾಡ ಲಾಗುವುದು. ಹಾಕಿ ಆಟಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ೫ಎ ಸೈಡ್ ಹಾಕಿ ನಮ್ಮೆ ಆಯೋಜಿಸಲಾಗಿದೆ ಎಂದು ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಚೈಯ್ಯಂಡ ಸತ್ಯ ಗಣಪತಿ ಹೇಳುತ್ತಾರೆ.

**
ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಜ್ಞಾಪಕಾರ್ಥ ೫ಎ ಸೈಡ್ ಕೊಡವ ಹಾಕಿ ನಮ್ಮೆ ಆಯೋಜಿಸಲಾಗಿದೆ. ೧೯೯೭ ರಲ್ಲಿ ಕುಟ್ಟಪ್ಪ ನೇತೃತ್ವದಲ್ಲಿ ಪ್ರಾರಂಭವಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ೨೦೧೮ ರವರೆಗೆ ನಿರಂತರವಾಗಿ ನಡೆದಿತ್ತು. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಕೊಡವ ಹಾಕಿ ಅಕಾಡೆಮಿ ನೇತೃತ್ವದಲ್ಲಿ ಕೊಡವ ಹಾಕಿ ನಮ್ಮೆ ಆಯೋಜಿಸಲಾಗಿದೆ. ಕುಕ್ಕೇರ ಜಯ ಚಿಣ್ಣಪ್ಪ, ಉಪಾಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ.

**
ಕೊಡವ ಹಾಕಿ ಅಕಾಡೆಮಿ ನೂತನ ಅಧ್ಯಕ್ಷ ಪಾಂಡಂಡ ಬೋಪಣ್ಣ ನೇತೃತ್ವದಲ್ಲಿ ಅಕಾಡೆಮಿ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿದೆ. ಅಕಾಡೆಮಿ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಹೆಚ್ಚು ಕ್ರಿಯಾಶೀಲರಾಗಿದ್ದು, ಕೊಡಗಿನಲ್ಲಿ ಹಾಕಿ ಆಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ೫ಎ ಸೈಡ್ ಹಾಕಿ ನಮ್ಮೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಳೇಟಿರ ಶ್ರೀನಿವಾಸ್, ಗೌರವಾಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net