ಮಾರಕ ಕೊರೊನಾ ವೈರಸ್​​ಗೆ ತತ್ತರಿಸುತ್ತಿದೆ ದಕ್ಷಿಣ ಕೊರಿಯಾ; 16 ಮಂದಿ ಸಾವು, ಇಂದು 594 ಜನರಲ್ಲಿ ಸೋಂಕು ಪತ್ತೆ

South Korea 29 Feb 20
Published on

ಸಿಯೋನ್​: ಕೊರೊನಾ ವೈರಸ್​ ಚೀನಾದಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಈ ಡೆಡ್ಲಿ ಸೋಂಕು ಚೀನಾ ಹೊರತು ಪಡಿಸಿ ಸದ್ಯ 54 ದೇಶಗಳಿಗೆ ಪಸರಿಸಿದ್ದಾಗಿ ವರದಿಯಾಗಿದೆ.

ಪಾಕಿಸ್ತಾನದಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದಾಗಿ ಮೊನ್ನೆಯಷ್ಟೇ ದೃಢಪಡಿಸಿತ್ತು. ದಕ್ಷಿಣ ಕೊರಿಯಾದಲ್ಲಿ ಶನಿವಾರ 594 ಹೊಸ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು ಅಲ್ಲಿಗೆ ಆ ದೇಶದಲ್ಲಿ ಒಟ್ಟು 2931 ಮಂದಿ ಕೊರೊನಾ ಪೀಡಿತರಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಾರಕ ಕೊರೊನಾ ವೈರಸ್​ಗೆ COVID-19 ಎಂದು ನಾಮಕರಣ ಮಾಡಿದೆ. ಚೀನಾದಲ್ಲಿ 83,000 ಜನರಿಗೆ ಸೋಂಕು ತಗುಲಿದೆ.

ಈ ಮಧ್ಯೆ ಯುಎಸ್​ನ ಹವಾಯಿಯನ್​ ಏರ್​ಲೈನ್ಸ್ ಸೌತ್​ ಕೊರಿಯಾಕ್ಕೆ ಮಾರ್ಚ್​ 2ರಿಂದ ವಿಮಾನಸೇವೆಯನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. ಹಾಗಾಗಿ ಟಿಕೆಟ್​ಗಳನ್ನು ಕೂಡ ಈಗಾಗಲೇ ಕ್ಯಾನ್ಸಲ್​ ಮಾಡಿದೆ.

ಚೀನಾದ ಹುಬೈ ಪ್ರಾಂತ್ಯದಲ್ಲಿ ಕೊರೊನಾ ವೈರಸ್​ಗೆ 2,788 ಜನರು ಬಲಿಯಾಗಿದ್ದು 78,824 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಂಗ್​ ಕಾಂಗ್​ನಲ್ಲಿ ಇಬ್ಬರು ಸಾವನ್ನಪ್ಪಿದ್ದು, 94 ಮಂದಿಯಲ್ಲಿ ವೈರಸ್​ ಇದೆ. ಹಾಗೇ ಚೀನಾದ ಮಕಾವೋದಲ್ಲಿ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನುಳಿದಂತೆ ಕೊರೊನಾ ವೈರಸ್​ ಸೋಂಕು ಪತ್ತೆಯಾಗಿರುವ ದೇಶಗಳು ಹೀಗಿವೆ...

ದಕ್ಷಿಣ ಕೊರಿಯಾ: 16 ಮಂದಿ ಸಾವು, 2931 ಜನರಲ್ಲಿ ಸೋಂಕು.

ಜಪಾನ್​: 11 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಒಟ್ಟು 931 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 705 ಮಂದಿ ಡೈಮಂಡ್​ ಪ್ರಿನ್ಸೆಸ್​ನ ಹಡಗಿನಲ್ಲಿ ಇದ್ದವರು.

ಇಟಲಿ: 650 ಜನರಲ್ಲಿ ಕೊರೊನಾ ಸೋಂಕು, 15 ಬಲಿ.

ಇರಾನ್​ : 388 ಜನರಿಗೆ ವೈರಸ್ ತಗುಲಿದ್ದು, 34 ಮಂದಿ ಸಾವನ್ನಪ್ಪಿದ್ದಾರೆ.

ಫ್ರಾನ್ಸ್​: 38 ಮಂದಿ ಸೋಂಕಿತರು, ಇಬ್ಬರು ಸಾವು.

ತೈವಾನ್​: 34 ಮಂದಿಗೆ ಕೊರೊನಾ ತಗುಲಿದ್ದು, ಒಂದು ಸಾವು ಉಂಟಾಗಿದ್ದಾಗಿ ವರದಿಯಾಗಿದೆ.

ಫಿಲಿಪೈನ್ಸ್​ನಲ್ಲಿ ಮೂರು ಜನರಿಗೆ ಸೋಂಕು ತಗುಲಿದ್ದು, ಒಂದು ಸಾವಾಗಿದೆ.

ಇನ್ನು ಸಿಂಗಪೂರ್​ನಲ್ಲಿ 98, ಯುಎಸ್​ನಲ್ಲಿ 60, ಜರ್ಮನಿ 53, ಕುವೈತ್​ 45, ಥೈಲ್ಯಾಂಡ್​ 41, ಆಸ್ಟ್ರೇಲಿಯಾದಲ್ಲಿ 43 ಜನರಿಗೆ ಕೊರೊನಾ ದೃಢಪಟ್ಟಿದೆ. ಇನ್ನುಳಿದಂತೆ ಹಲವು ದೇಶಗಳಿಗೂ ಸೋಂಕು ವ್ಯಾಪಿಸಿದ್ದು ಇದೊಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net