ಗ್ರಾಮ ಸಡಕ್ ಯೋಜನೆಯಲ್ಲಿ 5,612 ಕಿ.ಮೀ. ರಸ್ತೆ ಅಭಿವೃದ್ಧಿ

Road
Published on

ಬೆಂಗಳೂರು: ಮುಖ್ಯರಸ್ತೆ, ಪ್ರಮುಖ ಗ್ರಾಮೀಣ ಭಾಗದ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣಕ್ಕಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಾಜ್ಯಕ್ಕೆ 5612.50 ಕಿ.ಮೀ. ರಸ್ತೆ ಹಂಚಿಕೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಹಂಚಿಕೆಯಾಗಿರುವ ರಸ್ತೆಗೆ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಶೇ.40 ಅನುದಾನ ನೀಡಲಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 445 ರಸ್ತೆ ಕಾಮಗಾರಿಗಳು, 26 ಉದ್ದ ಸೇತುವೆಗಳನ್ನು ಒಳಗೊಂಡಂತೆ 3226.21 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗೆ 2729.66 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಉಳಿದ 2410.93 ಉದ್ದದ ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಿದ್ದು, ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

5 ವರ್ಷಗಳಲ್ಲಿ ಅಧಿಕ ಸಾಧನೆ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಈವರೆಗೂ 9.32 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿ ಶೇ.71.68 ಗುರಿ ಸಾಧನೆ ಮಾಡಲಾಗಿದೆ. ಕೂಲಿಗಾಗಿ 2493.18 ಕೋಟಿ ರೂ. ಮತ್ತು ಸಾಮಗ್ರಿಗಳಿಗಾಗಿ 609.65 ಕೋಟಿ ರೂ. ಸೇರಿ 3,155.05 ಕೋಟಿ ರೂ. ವೆಚ್ಚ ಮಾಡಲಾಗಿದೆ. 44.86 ಲಕ್ಷ ಕೂಲಿ ಕಾರ್ವಿುಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿದ್ದು, ಇದು 5 ವರ್ಷಗಳಲ್ಲಿ ಅತಿ ಹೆಚ್ಚಿನ ಸಾಧನೆಯಾಗಿದೆ. ಪ್ರಸ್ತುತ 8.3 ಲಕ್ಷ ಕಾಮಗಾರಿ ಪ್ರಗತಿಯಲ್ಲಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರು ಕೂಡ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ ಎಂದರು.

16 ಜಿಲ್ಲೆಗಳಲ್ಲಿ ಸ್ವಾಮಿತ್ವ: ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಲ್ಲಿ ರಾಮನಗರ ಜಿಲ್ಲೆಯ ಗೋಪಹಳ್ಳಿ ಗ್ರಾಪಂನ ಎಂ.ಜಿ.ಪಾಳ್ಯ ಮತ್ತು ಮಾಗಡಿ ತಾಲೂಕಿನ ಕಿಲಾರಿ ಕಾವಲ್ ಗ್ರಾಪಂನ ಬಸವಾಪಟ್ಟಣದಲ್ಲಿ ಆಸ್ತಿ ಕಾರ್ಡ್ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂದುವರಿದ ಭಾಗವಾಗಿ ರಾಮನಗರ, ಮೈಸೂರು, ಹಾಸನ, ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳ 10 ಗ್ರಾಮ ಪಂಚಾಯಿತಿಗಳಲ್ಲಿನ ಎಲ್ಲ 83 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿ 763 ಮಾಲೀಕರಿಗೆ ಆಸ್ತಿ ಕಾರ್ಡ್ ವಿತರಿಸಲಾಗಿದೆ. ಮೊದಲ ಹಂತದಲ್ಲಿ ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ. 2021ರ ಮಾರ್ಚ್ ಅಂತ್ಯಕ್ಕೆ 16,600 ಗ್ರಾಮಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಎರಡನೇ ಹಂತದಲ್ಲಿ 14 ಜಿಲ್ಲೆಗಳಲ್ಲಿ 2021ರ ಏಪ್ರಿಲ್ ನಂತರ ಅನುಷ್ಠಾನ ಮಾಡಲಾಗುವುದು. ಗ್ರಾಮೀಣ ಜನವಸತಿ ಪ್ರದೇಶಗಳ ಆಸ್ತಿ ಗುರುತಿಸಲು 12 ಡ್ರೋಣ್ ಯಂತ್ರಗಳನ್ನು ಒದಗಿಸಲಾಗುವುದು ಎಂದು ಈಶ್ವರಪ್ಪ ವಿವರಿಸಿದರು.

ಎಸ್​ಟಿ ಹೋರಾಟ, ಕ್ಷೌರಿಕರ ಸೇರ್ಪಡೆಗೆ ಈಶ್ವರಪ್ಪ ಸ್ಪಂದನೆ: ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜ ಸೇರ್ಪಡೆ ಹೋರಾಟದಲ್ಲಿ ಕ್ಷೌರಿಕರನ್ನು ಸೇರಿಸಿಕೊಳ್ಳುವ ಮನವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಎಂ.ಬಿ ಶಿವಕುಮಾರ್ ತಿಳಿಸಿದ್ದಾರೆ. ಕುರುಬರ ಹೋರಾಟ ಸಮಿತಿ ಮುಂದಾಳತ್ವ ವಹಿಸಿರುವ ಈಶ್ವರಪ್ಪರನ್ನು ನಾನು, ಕ್ಷೌರಿಕರ ಗುರುಪೀಠದ ಡಾ.ಲಿಂಗರಾಜ್ ಗುರೂಜಿ, ಅಭಿಮಾನಿ ಕ್ಷೌರಿಕ ಮುತ್ತುರಾಜ್ ಮತ್ತು ಎಚ್.ಎನ್ ನರಸಿಂಹಮೂರ್ತಿ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಇದಕ್ಕೆ ಸಚಿವರು ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕನಕ ಗುರುಪೀಠ ಸ್ವಾಮೀಜಿಗೆ, ಕುರುಬ ಜನಾಂಗದ ಮಂತ್ರಿಗಳಿಗೆ, ಶಾಸಕರುಗಳಿಗೆ, ಮಾಜಿ ಮಂತ್ರಿ ಮತ್ತು ಕುರುಬ ಸಮುದಾಯದ ಮುಖಂಡರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net