

ಕೊವಿಡ್-19 ಕಾರಣದಿಂದ ಶುರುವಾದ ಆನ್ಲೈನ್ ಕ್ಲಾಸ್ ಎಂಬುದು ಶಿಕ್ಷಕರಿಗೂ ಹೊಸದು, ಮಕ್ಕಳಿಗೂ ಹೊಸದು. ಅದೆಷ್ಟೋ ಹಿರಿಯ ಶಿಕ್ಷಕರಿಗೆ ಈ ಆನ್ಲೈನ್ ಕ್ಲಾಸ್ ಹೇಗೆ ತೆಗೆದುಕೊಳ್ಳುವುದು ಎಂಬುದು ಅಷ್ಟು ಸರಿಯಾಗಿ ಗೊತ್ತಿಲ್ಲ. ಸ್ಮಾರ್ಟ್ಫೋನ್, ಟ್ಯಾಬ್ಗಳ ಬಗ್ಗೆ ಅಷ್ಟೆಲ್ಲ ಸರಿಯಾದ ಮಾಹಿತಿಯಿಲ್ಲ.
ಇದೀಗ ಆನ್ಲೈನ್ ಕ್ಲಾಸ್ ವೇಳೆ 55ವರ್ಷದ ಶಿಕ್ಷಕರೋರ್ವರು ವಿದ್ಯಾರ್ಥಿಗಳಿಂದಲೇ ಅವಮಾನಕ್ಕೆ ಒಳಗಾದ ಘಟನೆ ನಡೆದಿದೆ. ತಂತ್ರಜ್ಞಾನದ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ಈ ಶಿಕ್ಷಕರಿಗೆ ಆನ್ಲೈನ್ ಕ್ಲಾಸ್ ಮಧ್ಯೆ ವಿದ್ಯಾರ್ಥಿಗಳು ತೀವ್ರ ಹಿಂಸೆ ನೀಡಿದ್ದಾಗಿ tedthestoner ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಪೋಸ್ಟ್ ಹಾಕಲಾಗಿದೆ. ಹಾಗೇ ಆ ಶಿಕ್ಷಕರ ಫೋಟೋವನ್ನೂ ಪೋಸ್ಟ್ ಮಾಡಲಾಗಿದೆ.
ಅಷ್ಟೇ ಅಲ್ಲ, ಶಿಕ್ಷಕರನ್ನು ಮಕ್ಕಳು ನಿಂದಿಸಬಾರದು. ಟ್ರೋಲ್ ಮಾಡುವುದಕ್ಕೂ ಅವಹೇಳನ ಮಾಡುವುದಕ್ಕೂ ವ್ಯತ್ಯಾಸವಿದೆ. ಒಬ್ಬರಿಗೆ ನೋವುಂಟು ಮಾಡದೆಯೇ ಹಾಸ್ಯ ಮಾಡಬಾರದು. ಅದರಲ್ಲೂ ವಿದ್ಯಾರ್ಥಿಗಳು ಹೀಗೆ ಆನ್ಲೈನ್ ಕ್ಲಾಸ್ನಲ್ಲಿ ಶಿಕ್ಷಕನ್ನು ನಿಂದಿಸುವುದು, ಸಂಸ್ಕಾರ ಹೀನ ಶಬ್ದಗಳನ್ನು ಬಳಸಿ ಮಾತನಾಡುವುದು ತಪ್ಪು ಎಂದು ಪೋಸ್ಟ್ ಹಾಕಲಾಗಿದೆ.
ಒಂದು ದಿನ ಶಾಲೆಯ ಪ್ರಿನ್ಸಿಪಲ್ ಈ 55ವರ್ಷದ ಶಿಕ್ಷಕನ್ನು ಕರೆದು, ಇನ್ನು ಮುಂದೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಬೇಕು. ನೀವು ಎಲ್ಲವನ್ನೂ ಕಲಿತುಕೊಳ್ಳಿ ಎಂದು ಹೇಳಿದರು. ಆದರೆ ಈ ಶಿಕ್ಷಕನಿಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಝೂಮ್ ಆ್ಯಪ್ನಲ್ಲಿ ಆನ್ಲೈನ್ ತರಗತಿ ಹೇಗೆ ನಡೆಸಬೇಕು ಎಂಬುದೂ ತಿಳಿಯಲಿಲ್ಲ. ಆದರ ಪ್ರಿನ್ಸಿಪಲ್ ಮಾತಿಗೆ ತಿರುಗಿ ಹೇಳುವ ಪರಿಸ್ಥಿತಿ ಇರಲಿಲ್ಲ. ಒಮ್ಮೆ ಆಗುವುದಿಲ್ಲ, ಬರುವುದಿಲ್ಲ ಎಂದರೆ ಕೆಲಸದಿಂದಲೇ ತೆಗೆಯುತ್ತಾರೆ ಎಂಬ ಭಯ. ಒಪ್ಪಿಕೊಂಡು ಮನೆಗೆ ಬಂದ ಶಿಕ್ಷಕರಿಗೆ ಅವರ ಮಗಳು ಮೊಬೈಲ್ನ ಝೂಮ್ ಆ್ಯಪ್ನಲ್ಲಿ ಆನ್ಲೈನ್ ತರಗತಿ ತೆಗೆದುಕೊಳ್ಳುವುದು ಹೇಗೆಂದು ಹೇಳಿಕೊಟ್ಟಳು. ಇದನ್ನೂ ಓದಿ: 2 ದಿನಗಳ ಹಿಂದೆ ಸಚಿನ್ ಪೈಲಟ್ ಮತ್ತು ಅಭಿಷೇಕ್ ಮನು ಸಿಂಘ್ವಿ ಫೋನ್ನಲ್ಲಿಯೇ ದೊಡ್ಡದಾಗಿ ನಕ್ಕಿದ್ದು ಏಕೆ ಗೊತ್ತಾ?
ಅದೆಲ್ಲದರ ಮಧ್ಯೆ ಮಾರ್ಕೆಟ್ಗೆ ಹೋಗಿ ಒಂದು ಬಿಳಿ ಬಣ್ಣದ ಬೋರ್ಡ್ ಖರೀದಿಸಿದರು. ಅದರ ಬೆಲೆಯೂ ಹೆಚ್ಚಿತ್ತು. ಆದರೆ ಮಕ್ಕಳಿಗೆ ತೊಂದರೆಯಾಗಬಾದರು ಎಂಬ ಕಾರಣಕ್ಕೆ ಹಣ ಲೆಕ್ಕಿಸದೆ ಬೋರ್ಡ್ ತಂದರು.
ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಆನ್ಲೈನ್ ಕ್ಲಾಸ್ಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಮರಾ ಆನ್ ಮಾಡುವುದು, ಅದನ್ನು ಸರಿಯಾದ ಆ್ಯಂಗಲ್ನಲ್ಲಿ ಇಟ್ಟುಕೊಂಡು ಪಾಠ ಮಾಡುವುದು ಬಹುದೊಡ್ಡ ಹಿಂಸೆಯಾಗಿತ್ತು. ಆದರೂ ಅನಿವಾರ್ಯ ಮತ್ತು ಅವಶ್ಯಕತೆ ಇದ್ದಿದ್ದರಿಂದ ಕಷ್ಟ ಸಹಿಸಿಕೊಂಡು ಪಾಠ ಮಾಡಲು ಸಿದ್ಧರಾಗಿಯೇಬಿಟ್ಟರು. ಇದನ್ನೂ ಓದಿ: ಕರೊನಾ ಸೋಂಕಿತಳೆಂಬ ಶಂಕೆ: ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ರಸ್ತೆಗೆಸೆದ ಬೆನ್ನಲ್ಲೇ ಮಹಿಳೆ ಸಾವು
ಅಂತೂ ಅಂದು ಬೆಳಗ್ಗೆ ಮೊದಲನೇ ಕ್ಲಾಸ್ ಪ್ರಾರಂಭವಾಯಿತು. ಶಿಕ್ಷಕರು ಹೊಸ ಶರ್ಟ್ ಹಾಕಿಕೊಂಡು ಪಾಠ ಪ್ರಾರಂಭ ಮಾಡಿದರು. ಕ್ಯಾಮರಾ ಆನ್ ಮಾಡಿದರೂ. ಮಕ್ಕಳೂ ಕಾಣುತ್ತಿದ್ದರು. ಆದರೆ ಈ ಶಿಕ್ಷಕನ ಕೈ ನಡುಗುತ್ತಿತ್ತು. ಧ್ವನಿಯಲ್ಲಿ ಅಳುಕು ಎದ್ದುಕಾಣುತ್ತಿತ್ತು.
ಪಾಠ ನಡೆಯುತ್ತಿರುವ ಮಧ್ಯೆಯೇ ಓರ್ವ ವಿದ್ಯಾರ್ಥಿ ತರಲೆ ಶುರು ಮಾಡಿದನು. ಅಸಭ್ಯ ಭಾಷೆಯಲ್ಲಿ ಮಾತನಾಡಿದನು. ಏನೇನೋ ಹೇಳುತ್ತ, ದೊಡ್ಡದಾಗಿ ನಗುತ್ತ ಅವಮಾನ ಮಾಡುವಂತಹ ಹಾಸ್ಯ ಮಾಡಿದನು. ಒಮ್ಮೆಲೇ ಬಂದ ಇಂಥ ಮಾತುಗಳಿಂದ ಶಿಕ್ಷಕನಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯಲಿಲ್ಲ. ದೊಡ್ಡದಾಗಿ ಕೋಪದಿಂದ ಕೂಗಿದರು. ಉಳಿದೆಲ್ಲ ವಿದ್ಯಾರ್ಥಿಗಳ ಎದುರು ಶಿಕ್ಷಕನಿಗೆ ತುಂಬ ಅವಮಾನ ಆಯಿತು. ಆ ಹಿರಿಯ ಜೀವ ಅವಮಾನದಿಂದ ಕುಗ್ಗಿಹೋಯಿತು.
ಮಕ್ಕಳ ಮಾತುಗಳನ್ನು ಮ್ಯೂಟ್ ಮಾಡುವುದು ಹೇಗೆಂದೂ ಮಗಳು ಹೇಳಿಕೊಟ್ಟಿದ್ದಳು. ಆದರೆ ವಿದ್ಯಾರ್ಥಿ ಶಿಕ್ಷಕನ ಮಾತುಗಳೇ ಕೇಳದಂತೆ ಮಾಡಿಕೊಂಡು ಒಂದೇ ಸಮನೆ ಅವನಿಗೆ ಅವಮಾನ ಮಾಡುತ್ತಿದ್ದನು. ನಂತರ ಶಿಕ್ಷಕರು ಬೇರೆ ದಾರಿ ಕಾಣದೆ ಕ್ಲಾಸ್ ಮುಗಿಸಿದರು.
ಆದರೆ ನಂತರ ಶಿಕ್ಷಕ ತುಂಬ ಅಳುತ್ತಿದ್ದರು. ಉದ್ವೇಗಕ್ಕೊಳಗಾಗಿ ಮಗಳನ್ನು ಕರೆದರು. ಹತ್ತಿರ ಬಂದ ಪುತ್ರಿಯನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅಳಲು ಶುರುಮಾಡಿದರು. ಒಂದು ಕಡೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಲು ಆಗುತ್ತಿದ್ದ ಹಿಂಸೆ..ಇನ್ನೊಂದೆಡೆ ವಿದ್ಯಾರ್ಥಿ ಆಡಿದ ಕೆಟ್ಟ ಮಾತುಗಳೆಲ್ಲ ಸೇರಿ ಒಂದೇ ಸಮ ಕಣ್ಣಲ್ಲಿ ನೀರು ಹಾಕುತ್ತಿದ್ದರು. ಬಳಿಕ ಅವರ ಪುತ್ರಿ ತನ್ನ ತಂದೆಯನ್ನು ಸಮಾಧಾನ ಮಾಡಿದರು.
ಇಷ್ಟು ವರ್ಷ ಕಷ್ಟಪಟ್ಟು ಪಡೆದ ಗೌರವವೆಲ್ಲ ಆನ್ಲೈನ್ ಕ್ಲಾಸ್ನಿಂದ ಹೋಗಿತ್ತು.ಅವರು ಇಷ್ಟು ಅವಮಾನವನ್ನು ಎಂದಿಗೂ ಅನುಭವಿಸಿರಲಿಲ್ಲ ಎಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ವಿವರಿಸಲಾಗಿದೆ. (ಏಜೆನ್ಸೀಸ್)