

ಕೋಲಾರ: ಜಿಲ್ಲೆಯಲ್ಲಿ "ಮಾಂಡೌಸ್' ಚಂಡಮಾರುತ ಶನಿವಾರ ಇಡೀ ದಿನ ರೌದ್ರಾವತಾರ ತಾಳಿದ್ದು, ಒಂದೇದಿನ 55ಮಿಮೀ ಭಾರಿ ಮಳೆಯಾದ ವರದಿಯಾಗಿದೆ. ಶುಕ್ರವಾರ ಬೆಳಗ್ಗೆ 8.30ರಿಂದ ಶನಿವಾರ ಬೆಳಗ್ಗೆ 8.30ಗಂಟೆ ತನಕ 18ಮಿ.ಮೀ. ಮಳೆಯಾಗಿದ್ದು, ಭಾನುವಾರ ಮೂರ್ನಾಲ್ಕು ಬಾರಿ ಮಳೆಯಾದರೂ ವರುಣ ಬಿಡುವು ಕೊಟ್ಟಿತ್ತು. ಇದರಿಂದಾಗಿ ಜನಜೀವನ ಸಹಜ ಸ್ಥಿತಿಗೆ ಮರುಳಿತು.
ಶನಿವಾರ ಬೆಳಗ್ಗೆ 8.30ರಿಂದ ಭಾನುವಾರ ಬೆಳಗ್ಗೆ 8.30ರ ವರೆಗೆ ಶ್ರೀನಿವಾಸಪುರ ತಾಲೂಕಿನ ನೆಲವಂಕಿಯಲ್ಲಿ ಅತ್ಯಧಿಕ 140 ಮಿಮೀ ಮಳೆ ಸುರಿದಿದ್ದು, ಕೋಲಾರ ತಾಲೂಕು ಅಮ್ಮನಲ್ಲೂರಿನಲ್ಲಿ 110ಮಿಮೀ, ಮಾಲೂರು ತಾಲೂಕಿನ ನೂಟವೆಯಲ್ಲಿ 77ಮಿಮೀ, ಮುಳಬಾಗಿಲು ತಾಲೂಕು ಎಚ್.ಗೊಲ್ಲಹಳ್ಳಿಯಲ್ಲಿ 67ಮಿಮೀ ಮಳೆಯಾಗಿದೆ. ಕೋಲಾರ ತಾಲೂಕು ಮಂಗಸಂದ್ರದಲ್ಲಿ ಮರವೊಂದು ಧರೆಗುರುಳಿದ್ದು, ಉಳಿದಂತೆ ಇತರೆ ಆಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ.
ಸಾಮಾನ್ಯವಾಗಿ ಡಿಸೆಂಬರ್ನಲ್ಲಿ 12 ಮಿ.ಮೀ .ಮಳೆಯಾಗುತ್ತಿದ್ದು, ಈ ಬಾರಿ 71 ಮಿ.ಮೀ. ಮಳೆಯಾಗಿದೆ. ಇನ್ನು ಈ ವರ್ಷ ಜನವರಿಯಿಂದ ಇಲ್ಲಿತನಕ 727ಮಿ.ಮೀ. ಮಳೆಯಾಗಬೇಕಿದ್ದು, ಈ ಬಾರಿ 1202 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷವೂ ಅತ್ಯಧಿಕ ಮಳೆಯಾಗಿತ್ತು.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿ, ಕೆಸರು ಗದ್ದೆಗಳಾಗಿ ಮಾರ್ಪಾಡಾಗಿವೆ. ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗಿದ್ದು, ಈ ಮಳೆಗೆ ಮತ್ತಷ್ಟು ಹದಗೆಟ್ಟಿವೆ. ಜಿಲ್ಲಾಡಳಿತ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳದೇ ದಿವ್ಯ ಮೌನ ವಹಿಸಿದೆ. 2 ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಜಿಲ್ಲೆಯ ರಸ್ತೆಗಳ ದುರಸ್ತಿ ಬಗ್ಗೆ 2 ದಿನಗಳ ಕಾಲ ಕೋಲಾರದಲ್ಲಿದ್ದು ಸರಿಪಡಿಸುವುದಾಗಿ ಹೇಳಿ ಹೋದವರು, ಇದುವರೆಗೂ ಜಿಲ್ಲೆ ಕಡೆ ತಿರುಗಿ ನೋಡಿಲ್ಲ.
ಶುಕ್ರವಾರ ಪ್ರಾರಂಭವಾದ ಮಳೆ ಇಡೀ ದಿನ ಶೀತ ಗಾಳಿಯೊಂದಿಗೆ ತುಂತುರು ಮಳೆ ಕಾಣಿಸಿಕೊಂಡಿತು. ಶುಕ್ರವಾರ ರಾತ್ರಿ ಮತ್ತು ಶನಿವಾರ ಜಿಲ್ಲೆಯಾದ್ಯಂತ ಎಡೆಬಿಡದೆ ಭಾರಿ ಮಳೆ ಸುರಿದ ಕಾರಣ ಶನಿವಾರ ಮನೆಯಿಂದ ಜನರು ಹೊರಬರಲು ಸಾಧ್ಯವಾಗಲಿಲ್ಲ. ಭಾನುವಾರ ಸ್ವಲ್ಪಮಟ್ಟಿಗೆ ಬಿಡುವುಕೊಟ್ಟಿತ್ತು. ಆದರೂ ಮಳೆ ಬಳಿಕ ತುಂತುರು ಮಳೆ ಜತೆಗೆ ಶೀತ ಗಾಳಿ ಬೀಸುತ್ತಿತ್ತು.
ಭಾನುವಾರ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡಿದ ಕಾರಣ ತರಕಾರಿ, ಹಣ್ಣು, ಹೂವು ಖರೀದಿದಾರರು ಮಾರುಕಟ್ಟೆ ಕಡೆ ಹೆಜ್ಜೆ ಹಾಕುತ್ತಿರುವುದು ಕಂಡುಬಂತು. ಭಾನುವಾರ ರಜೆಯಿದ್ದ ಕಾರಣ ಮಾಂಸದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.
ಕರೊನಾ ನಂತರ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತಾಗಿದ್ದು, ರಜೆ ಘೋಷಣೆಗೆ ಮುನ್ನ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಯೋಚಿಸುವಂತಾಗಿದೆ. ಮಳೆ ಅಬ್ಬರವಿದ್ದಿದ್ದರಿಂದ ಶನಿವಾರ ಅಗತ್ಯವಾದರೆ ರಜೆ ಘೋಷಿಸುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿತ್ತು. ಆದರೆ ಭಾನುವಾರ ಮಳೆ ತಗ್ಗಿದ್ದು, ಸೋಮವಾರ ಪರಿಸ್ಥಿತಿ ನೋಡಿಕೊಂಡು ತೀಮಾರ್ನ ತೆಗೆದುಕೊಳ್ಳಲಾಗುವುದು.
ಕೃಷ್ಣಮೂರ್ತಿ, ಡಿಡಿಪಿಐ, ಕೋಲಾರ
ಬೂದಿಕೋಟೆ: ವಾಯುಭಾರ ಕುಸಿತದಿಂದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಬಂಗಾರಪೇಟೆ ತಾಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ. ಚಳಿಗೆ ಜನರು ಮನೆಯಿಂದಾಚೆ ಬಾರದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಹಲವು ಕೆರೆಕುಂಟೆಗಳು ಭರ್ತಿಯಾಗಿ ಕೋಡಿ ಹರಿಯುತಿದ್ದು, ಬೆಳೆಗಳಲ್ಲಿ ನೀರು ನಿಂತಿದೆ.
ಬೂದಿಕೋಟೆಯ ರಾಮಚಂದ್ರರಾಯರ ಕೆರೆ ಕೋಡಿ ಹರಿಯುತ್ತಿದ್ದು, ಒಂದೆಡೆ ಮಳೆಯ ನಡುವೆ ಕೋಡಿ ನೋಡಲು ಜನಮುಗಿಬೀಳುತ್ತಿದ್ದಾರೆ. ಇನ್ನೊಂದೆಡೆ ಮಳೆ ಹೆಚ್ಚಾದ ಕಾರಣ ಎಲೆಕೋಸು, ಬೀನ್ಸ್, ಟೊಮ್ಯಾಟೊ ಸೇರಿ ಹಲವು ತೋಟಗಾರಿಕೆ ಬೆಳೆಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದ ರಾಗಿ ತೆನೆ ಕಟಾವು ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಲೇ ಮಳೆಯಿಂದಾಗಿ ತೆನೆ ನೆನೆಯುತ್ತಿದ್ದು, ಹೀಗೆಯೇ ಮಳೆ ಮುಂದುವರಿದರೆ ತೆನೆಯಲ್ಲಿ ಮೊಳಕೆ ಒಡೆಯುತ್ತದೆ. ಈಗಾಗಲೇ ತೆನೆ ಕಟಾವು ಮಾಡಿದ ರೈತರು ಮಳೆಯಿಂದ ತೆನೆ ರಸಲು ಟಾರ್ಪಲ್ ಮುಚ್ಚಿದ್ದರಿಂದ ತೆನೆ ಬೂಸ್ಟ್ ಹಿಡಿಯುತ್ತಿದೆ.
ಶ್ರೀನಿವಾಸಪುರ: ತಾಲೂಕಿನಲ್ಲಿ ಮಳೆಗೆ ಬೆಳೆ ಹಾನಿಯಾಗಿದ್ದು, ವಿವಿಧೆಡೆ ಮನೆಗಳು ಕುಸಿದಿವೆ. ತಾಲೂಕಿನ ಶೆಟ್ಟಿಹಳ್ಳಿ, ಆರಮಾಕಲಹಳ್ಳಿ, ಚೌಡನಹಳ್ಳಿ, ವರ್ತನಹಳ್ಳಿ ಸುತ್ತಮುತ್ತ 100 ಎಕರೆ ಜಮೀನಿನಲ್ಲಿ ಜೋಳ ಬೆಳೆಯಲಾಗಿತ್ತು. ಕಟಾವಿಗೆ ಬಂದಿದ್ದ 50 ಎಕರೆಯಷ್ಟು ಫಸಲು ನೆಲಕ್ಕುರುಳಿದೆ. ಜೋಳ, ಬೀನ್ಸ್, ಹೀರೆಕಾಯಿ, ಟೊಮ್ಯಾಟೊ, ಕ್ಯಾಪ್ಸಿಕ್ಂ, ಪಪ್ಪಾಯ ಹಾನಿಗೊಳಗಾಗಿವೆ. ತೊಗರಿ ಕಟಾವಿಗೆ ಬಂದಿದ್ದು, ಸತತ ಸುರಿಯುತ್ತಿರುವ ಮಳೆ ರೈತರಲ್ಲಿ ಅಂತಕ ಮೂಡಿಸಿದೆ.
ತೋಟದಲ್ಲಿ ಆರೂವರೆ ಎಕರೆ ಜೋಳ ಬಿತ್ತಿದ್ದು, ಗಾಳಿ ಮಳೆಗೆ ಒಂದೂವರೆ ಎಕರೆಯಷ್ಟು ಬೆಳೆ ನೆಲಕ್ಕುರುಳಿವೆ. ಭಾನುವಾರ ಬೆಳಗ್ಗೆ ಕಂದಾಯ ಇಲಾಖೆಯ ಸಿಬ್ಬಂದಿ ಬಂದು ನಷ್ಟವಾಗಿರುವ ಬೆಳೆಯನ್ನು ವೀಕ್ಷಿಸಿದ್ದು, ಇಲಾಖೆಗೆ ಅರ್ಜಿಯೊಂದಿಗೆ ನಷ್ಟವಾದ ಬೆಳೆಯ ಭಾವಚಿತ್ರ ಹಾಗೂ ಜಮೀನಿನ ದಾಖಲೆ ಸಲ್ಲಿಸಲು ತಿಳಿಸಿದಾರೆ. ಸೋಮವಾರ ತೋಟಗಾರಿಕೆ ಇಲಾಖೆ ಸಿಬ್ಬಂದಿ ಬರುವುದಾಗಿ ತಿಳಿಸಿದ್ದಾರೆ. ಕೈಗೆ ತುತ್ತು ಬಾಯಿಗೆ ಬಾರದಂತಾಗಿದ್ದು, ಸರ್ಕಾರ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಶೆಟ್ಟಿಹಳ್ಳಿ ರೈತ ಮುರುಳಿ ಆಗ್ರಹಿಸಿದ್ದಾರೆ.
ಕೆಜಿಎಫ್: ಸತತ ಸುರಿಯುತ್ತಿರುವ ಜಡಿಮಳೆಯಿಂದ ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದು, ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರ ಪರದಾಟ ಕಂಡ ನಗರಸಭೆ ಸದಸ್ಯ ವೇಣಿ ಪಾಂಡಿಯನ್ ರಸ್ತೆಯ ಗುಂಡಿಗಳಲ್ಲಿ ನಿಂತಿದ್ದ ಮಳೆನೀರನ್ನು ತೆರವುಗೊಳಿಸಿದರು.
ನಗರದ ಬಸ್ ನಿಲ್ದಾಣದಿಂದ ಸ್ಕೂಲ್ ಆಫ್ ಮೈನ್ಸ್ ಶಾಲೆಗೆ ಹೋಗುವ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದರಿಂದ, ಬೈಕ್ ಸವಾರರು, ಆಟೋಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ರೋಗಿಗಳು, ಕಾರು, ಬಸ್ಗಳು ಹರಸಾಹಸ ಪಡಬೇಕಾಗಿತ್ತು. ಹಲವು ಬೈಕ್ ಸವಾರರು ರಸ್ತೆ ಗುಂಡಿಯಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂದು ಅಂದಾಜು ಮಾಡಲಾಗದೆ ಆಯತಪ್ಪಿ ಬಿದ್ದು ಸಾಕಷ್ಟು ಅವಘಡಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೆಳಗ್ಗೆ ಈ ಮಾರ್ಗದಲ್ಲಿ ಬರುವಾಗ ವಾಹನ ಸವಾರರು, ಸಾರ್ವಜನಿಕರು ಹರಸಾಹಸಪಡುತ್ತಿರುವುದನ್ನು ಕಂಡು ಗುಂಡಿಚಿತ್ರ ತೆಗೆದು ನಗರಸಭೆ ಅಧ್ಯಕ್ಷ ಮುನಿಸ್ವಾಮಿ ಅವರಿಗೆ ಕಳುಹಿಸಿ, ಕರೆ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ಕರೆಗೆ ಸ್ಪಂದಿಸಿದ ಅಧ್ಯಕ್ಷರು ಒಂದು ಲೋಡ್ ಜೆಲ್ಲಿ ಮತ್ತು ವೆಟ್ ಮಿಕ್ಸ್ನ್ನು, ಲೋಕೋಪಯೋಗಿ ಇಲಾಖೆಯವರು ಜೆಸಿಬಿ ಯಂತ್ರವನ್ನು ಮತ್ತು ನಗರಸಭೆಯಿಂದ ಸಕ್ಕಿಂಗ್ ಯಂತ್ರವನ್ನು ಕಳುಹಿಸಿಕೊಟ್ಟಿದ್ದು ರಸ್ತೆಯಲ್ಲಿ ತುಂಬಿದ್ದ ನೀರನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ಅನುವು ಮಾಡಿಕೊಡಲಾಗಿದೆ ಎಂದು ನಗರಸಭಾ ಸದಸ್ಯ ವೇಣಿ ಪಾಂಡಿಯನ್ ತಿಳಿಸಿದ್ದಾರೆ.
ಕೆಜಿಎಫ್-: ಮಳೆಗೆ ನಗರದ ಆಲದಮರದ ಬಳಿಯ ಆಫೀಸರ್ಸ್ ಕ್ವಾರ್ಟಸ್ನಲ್ಲಿದ್ದ ಬೃಹತ್ ಮರವು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶನಿವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ವಾರ್ಡ್ ಸಂಖ್ಯೆ 1ರ ಬೆಮೆಲ್ ನಗರದ ಬೆಮೆಲ್ ಕ್ಲಬ್ ಎದುರಿನ ಮುಖ್ಯರಸ್ತೆಯ ಬೃಹತ್ ಮರವು ಇನ್ನೊಂದು ಬದಿಯ ವಿದ್ಯುತ್ ತಂತಿಗಳ ಮೇಲೆ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಶನಿವಾರ ರಾತ್ರಿ ಕ್ವಾರ್ಟಸ್ನಲ್ಲಿ ವಿದ್ಯುತ್ ಕಡಿತವಾಗಿ ನಾಗರಿಕರು ಪರದಾಡಿದರು.
ಭಾನುವಾರ ಬೆಳಗ್ಗೆ ಬೆಸ್ಕಾಂ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.
ಬಂಗಾರಪೇಟೆ: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಾಲೂಕಿನಾದ್ಯಂತ ಬೀಳುತ್ತಿರುವ ಜಡಿ ಮಳೆಯಿಂದ ಪಟ್ಟಣದ ದೇಶಿಹಳ್ಳಿ ಗ್ರಾಮದ ಸುಗುಣಮ್ಮ, ಅಮರೇಶ್ ಎಂಬುವರ ಮನೆಯ ಮೇಲ್ಛಾವಣೆ ಭಾನುವಾರ ರಾತ್ರಿ ಕುಸಿದಿದೆ.
ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲ್ಛಾವಣಿ ಕುಸಿದಿದೆ. ರಾತ್ರಿ ಅವರ ತಂದೆಯವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ಟನೆ ನಡೆದಿದೆ.
ಸ್ಥಳಕ್ಕೆ ಪುರಸಭೆ ಆರೋಗ್ಯಾಧಿಕಾರಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಡಿಎಸ್ಎಸ್ ಶ್ರೀನಿವಾಸ್ ಹಾಗೂ ಸ್ಥಳಿಯ ನಿವಾಸಿಗಳು ಇದ್ದರು.