54 ದಿನದ ಮಗುವನ್ನೆತ್ತಿ ಗೋಡೆಗೆಸೆದ; ಮಗುವಿನ ಸ್ಥಿತಿ ಗಂಭೀರ

Shaiju Thomas
Published on

ಎರ್ನಾಕುಲಂ: ಆ ಮಗುವಿಗೆ ಕೇವಲ 54 ದಿನ. ಆಸ್ಪತ್ರೆಗೆ ಬಂದ ಆತನಿಗೆ ಆ ಮಗುವನ್ನು ನೋಡಿ ಸಹಿಸೋದಕ್ಕಾಗಲಿಲ್ಲ. ಮಗುವಿನ ಕಾಲನ್ನೆತ್ತಿ ಗೋಡೆಗೆ ಒಗೆದೇ ಬಿಟ್ಟ. ಇಷ್ಟಕ್ಕೂ ಆತ ಕಂಸನಲ್ಲ. ಆ ಮಗುವಿನಿಂದಲೇ ಆತನಿಗೆ ಮರಣ ಎಂದು ಯಾರೂ ಹೇಳಿರಲಿಲ್ಲ. ಏನಿದು ಪ್ರಕರಣ?

ಎರ್ನಾಕುಲಂ ಸಮೀಪದ ಕೊಲಂಚೆರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ದುರಂತ ಘಟನೆ ಇದು. 54 ದಿನದ ಮಗುವನ್ನೆತ್ತಿ ಗೋಡೆಗೆಸೆದಾತ ಬೇರಾರೂ ಅಲ್ಲ. ಆ ಮಗುವಿನ ಅಪ್ಪ. ಅಂಗಮಾಲಿ ನಿವಾಸಿ ಶೈಜು ಥಾಮಸ್​(40) ಆರೋಪಿ ಅಪ್ಪ. ಅದೂ ಹೆಣ್ಮಗು. ಆ ಮಗುವಿಗೆ ಬ್ರೇನ್ ಹೆಮರೇಜ್ ಆಗಿದ್ದು, ಗಂಭೀರ ಗಾಯಗೊಂಡಿದೆ. ಹೀಗಾಗಿ ಮಗುವನ್ನು ಕೊಲಂಚೆರಿ ಮೆಡಿಕಲ್ ಮಿಷನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಕೊಲಂಚೆರಿ ಮಡಿಕಲ್ ಕಾಲೇಜಿನ ಡಾ.ಸೋಜನ್ ಐಪ್​ ಹೇಳುವ ಪ್ರಕಾರ, ಮಗು ಗಾಯಗೊಂಡ ಸ್ವಲ್ಪ ಹೊತ್ತಿನಲ್ಲಿ ಪಾಲಕರು ಆಸ್ಪತ್ರೆಯ ಡಾಕ್ಟರ್​ಗೆ ಮಾಹಿತಿ ತಿಳಿಸಿದ್ದು, ಮಗು ಮಂಚದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದರು. ಸಂದೇಹ ಬಂದು ಮತ್ತೆ ವಿಚಾರಿಸಿದಾಗ ಸೊಳ್ಳೆ ಬ್ಯಾಟ್ ಬಳಸಿದ ವೇಳೆ ಆಕಸ್ಮಿಕವಾಗಿ ಮಗುವಿಗೆ ಏಟಾಗಿದೆ ಎಂದು ಹೇಳಿದರು. ಈ ರೀತಿ ಪದೇಪದೆ ಹೇಳಿಕೆ ಬದಲಾದಾಗ ಪೊಲೀಸರಿಗೆ ಮಾಹಿತಿ ನೀಡಿ ಮೆಡಿಕೋ ಲೀಗಲ್ ಕೇಸ್ ದಾಖಲಿಸಲಾಗಿದೆ.

ಘಟನೆ ನಡೆದು ಕೇವಲ ಎರಡು ಗಂಟೆಯೊಳಗೆ ಕೇಸ್ ದಾಖಲಾಗಿದೆ. ಪೊಲೀಸರು ಶೈಜುವನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಳಕಿಗೆ ಬಂದ ಅಂಶ ಹೀಗಿದೆ- ಪತ್ನಿ ನೇಪಾಳ ಮೂಲದವಳು. ಫೇಸ್​ಬುಕ್ ಮೂಲಕ ಪರಿಚಯವಾಗಿ ಪ್ರೇಮಿಸಿ ನೇಪಾಳದಲ್ಲೇ ಕಳೆದ ವರ್ಷ ಮದುವೆಯಾದವರು. ಕಳೆದ 10 ತಿಂಗಳಿಂದ ಅಂಗಮಾಲಿಯ ಜೋಸ್​ಪುರಂನಲ್ಲಿ ವಾಸವಿದ್ದರು. ಹೆಣ್ಣು ಮಗು ಜನಿಸಿದ್ದರಿಂದ ಶೈಜು ಭಾರಿ ನಿರಾಶೆಗೊಳಗಾಗಿದ್ದ. ಹೀಗಾಗಿ ಆ ಮಗುವಿನ ತಂದೆಯ ಬಗ್ಗೆ ಸಂದೇಹ ಹೊಂದಿದ್ದ. ಕಳೆದ ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಗು ಅಳುವುದಕ್ಕೆ ಶುರುಮಾಡಿದಾಗ ಸಹನೆ ಕಳೆದುಕೊಂಡ ಶೈಜು ಥಾಮಸ್​ ಪತ್ನಿ ಕೈಯಲ್ಲಿದ್ದ ಮಗುವನ್ನು ಬಲವಂತವಾಗಿ ಹಿಡಿದೆಳೆದು ಮಗುವಿನ ಕಾಲು ಹಿಡಿದು ಎರಡು ಬಾರಿ ಗೋಡೆಗೆ ಬಡಿದಿದ್ದ.

ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಕೊಲಂಚೆರಿ ಮೆಡಿಕಲ್ ಮಿಷನ್ ಹಾಸ್ಲಿಟಲ್​ನ ಡಾಕ್ಟರ್​ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net