ಯುವತಿ ಬೆದರಿಸಿ ೫ ಸಾವಿರ ರೂ. ಸುಲಿಗೆ: ಸಂಚಾರ ಪೊಲೀಸರ ಮೇಲೆ ಗಂಭೀರ ಆರೋಪ

Crime Logo
Published on

ಬೆಂಗಳೂರು: ಸಂಚಾರ ಠಾಣೆ ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ ಆರೋಪ ಹೊರಿಸಿ ಯುವತಿಯೊಬ್ಬಳಿಂದ ಐದು ಸಾವಿರ ರೂ. ಸುಲಿಗೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಯುವತಿಯ ತಂದೆಯ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಘಟನೆಯ ವಿವರ ಬರೆದು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ.
‘‘ಹಳೆ ವಿಮಾನನಿಲ್ದಾಣ ರಸ್ತೆಯಲ್ಲಿ ಶುಕ್ರವಾರ ರಾತ್ರಿ ೧೧ ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ನನ್ನ ಮಗಳು ಆಗಮಿಸುತ್ತಿದ್ದ ವೇಳೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನೆಪದಲ್ಲಿ ಜೀವನ್ ಭೀಮಾ ನಗರ ಸಂಚಾರ ಪೊಲೀಸರು ತಡೆದಿದ್ದಾರೆ. ಬಳಿಕ ಮದ್ಯ ಸೇವನೆ ಪತ್ತೆ ಪರೀಕ್ಷೆ ನಡೆಸದೆಯೇ, ‘ನೀನು ಮದ್ಯ ಸೇವಿಸಿದ್ದು, ೧೫ ಸಾವಿರ ರೂ. ನೀಡಿದರೆ ಬಿಟ್ಟು ಕಳುಹಿಸುತ್ತೇವೆ’ ಎಂದು ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ೫ ಸಾವಿರ ರೂ.ಗಳನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದಾರೆ’ ಎಂದು ಯುವತಿಯ ತಂದೆ ಕೋಶಿ ವರ್ಗಿಸ್ ಎಂಬುವವರು ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ವಿಭಾಗ ಹಾಗೂ ಜೀವನ್‌ಭೀಮಾನಗರ ಸಂಚಾರ ಠಾಣೆ ಪೊಲೀಸರು, ೫ ಸಾವಿರ ರೂ. ಗೂಗಲ್ ಪೇ ಮಾಡಿದ ಮೊಬೈಲ್ ನಂಬರ್ (ಯುಪಿಐ) ವಿವರ ಕೋರಿದ್ದು, ಅದನ್ನು ದೂರುದಾರರು ಒದಗಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net