ಟ್ಯೂಷನ್​ ಕೊಡುವ ಟೀಚರ್​ಗಳೇ ಎಚ್ಚರ!: ಐದು ವರ್ಷದ ಮಕ್ಕಳೂ ಜಾಗೃತರಾಗಿದ್ದಾರೆ ನೋಡಿ...

gurudaspur kid 27 APR 20
Published on

ಚಂಡೀಗಢ: ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ದೇಶಾದ್ಯಂತ ಲಾಕ್​ಡೌನ್ ಜಾರಿಗೊಳಿಸಿದೆ. ಈ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನೂ, ಮಾರ್ಗಸೂಚಿಯನ್ನೂ ಪ್ರಕಟಿಸಿದೆ. ಆದಾಗ್ಯೂ ನಿಯಮ ಉಲ್ಲಂಘಿಸುವವರೇನೂ ಕಡಿಮೆ ಆಗಿಲ್ಲ. ಉಲ್ಲಂಘಿಸುವವರಿಗೆ ನೀಡುತ್ತಿರುವ ಶಿಕ್ಷೆಯೂ ಗಮನಸೆಳೆಯುತ್ತಿದೆ. ಇವೆಲ್ಲದಕ್ಕಿಂತ ಭಿನ್ನವಾದುದು ಈ ಸ್ಟೋರಿ. ಇದು ಲಾಕ್​ಡೌನ್ ನಿಯಮ ಉಲ್ಲಂಘಿಸಿ ಟ್ಯೂಷನ್ ಕ್ಲಾಸ್ ನಡೆಸುತ್ತಿರುವ ಶಿಕ್ಷಕರಿಗೆ ಎಚ್ಚರಿಕೆಯ ಘಂಟೆ!

ಇದು ಪಂಜಾಬ್​ನ ಗುರುದಾಸಪುರದಲ್ಲಿ ನಡೆದ ಘಟನೆ. ವ್ಯಕ್ತಿಯೊಬ್ಬರು ಇಬ್ಬರು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗ್ತಾ ಇದ್ರು. ಪೊಲೀಸರು ಇವರನ್ನು ತಡೆದು ಕೇಳಿದ್ರು- "ಎಲ್ಲಿಗೆ ಹೋಗ್ತಾ ಇದ್ದೀರಿ. ಲಾಕ್​ಡೌನ್ ನಿಯಮ ಪಾಲಿಸೋದಕ್ಕೆ ಆಗಲ್ವಾ?"

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು ಐದು ವರ್ಷದ ಮಗು- "ನೀವೇನೋ ಲಾಕ್​ಡೌನ್ ನಿಯಮ ಉಲ್ಲಂಘನೆ ಅಂತೀರಿ. ಅಲ್ಲಿ ನಮಗೆ ಟ್ಯೂಷನ್ ಕೊಡೋದಕ್ಕೆ ಟೀಚರ್​ ಮುಂದಾಗಿದ್ದಾರೆ. ಅವರಿಗೆ ಲಾಕ್​ಡೌನ್ ನಿಯಮ ಲಾಗೂ ಆಗಲ್ವಾ?"

ಮಗುವಿನ ಪ್ರಶ್ನೆ ಕೇಳಿದ ಪೊಲೀಸರು, ಟ್ಯೂಷನ್ ಕೊಡ್ತಾ ಇರುವ ಸ್ಥಳ, ವಿಳಾಸ ಮತ್ತು ಟೀಚರ ಹೆಸರು ವಿವರಗಳನ್ನು ನೋಟ್ ಮಾಡಿಕೊಂಡರು. ಬಟಾಲಾದ ಡಿಎಸ್​ಪಿ ಗುರುದೀಪ್ ಸಿಂಗ್ ಗಮನಕ್ಕೆ ಈ ವಿಷಯ ಬಂದಿದ್ದು, ಕೂಡಲೇ ಆ ಪೊಲೀಸರನ್ನು ಅವರ ಜತೆಗೆ ಕಳುಹಿಸಿಕೊಟ್ಟರು.

ಟ್ಯೂಷನ್ ಟೀಚರ್​ ಮನೆ ತಲುಪುತ್ತಲೇ ಮಗುವನ್ನು ಮುಂದೆ ಬಿಟ್ಟು ಪೊಲೀಸರು ಹಿಂದೆ ನಿಂತರು. ಆ ಮಗು ಬಾಗಿಲು ಬಡಿದು ಹೊರಗೆ ಬರುವಂತೆ ಟೀಚರನ್ನು ಕೇಳಿಕೊಂಡಿತು. ಟೀಚರ್ ಬಾಗಿಲು ತೆರೆದು ಹೊರ ಬಂದಾಗ, ಪೊಲೀಸರು ಅವರನ್ನು ಕೇಳಿದ್ರು- "ಈ ಮಗುವಿಗೆ ನೀವು ಟ್ಯೂಷನ್ ಕೊಡ್ತಾ ಇದ್ದೀರಾ? "

ಕೂಡಲೇ ಚೇತರಿಸಿಕೊಂಡ ಟೀಚರ್​, "ಇಲ್ವಲ್ಲಾ.. ನಾನೇನೂ ಟ್ಯೂಷನ್ ಮಾಡ್ತಾ ಇಲ್ಲ. ಮಗು ಸುಳ್ಳು ಹೇಳ್ತಾ ಇರಬೇಕು" ಅಂದ್ರು.

ಆದರೆ ಮಗು ಕೂಡಲೇ ಅಲ್ಲೇ ಟ್ಯೂಷನ್​ಗೆ ಬಂದ ಇತರೆ ಮೂವರು ಮಕ್ಕಳನ್ನು ತೋರಿಸಿತು. ಅವರನ್ನು ವಿಚಾರಿಸಿದಾಗ ಟ್ಯೂಷನ್ ಟೀಚರ್​ ಬಣ್ಣ ಬಯಲಾಗಿದೆ. ಪೊಲೀಸರು ಟೀಚರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಎಚ್ಚರಿಸಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.

ಶನಿವಾರ ನಡೆದ ಈ ಇಡೀ ಘಟನೆ ವಿಡಿಯೋ ಚಿತ್ರೀಕರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರೂ ಇದನ್ನು ಜಾಗೃತಿ ಮೂಡಿಸುವ ಸಲುವಾಗಿ ಬಳಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net