

ಈ 5ವರ್ಷದ ಬಾಲಕನನ್ನು ನೆಟ್ಟಿಗರು ಸಿಕ್ಕಾಪಟೆ ಹೊಗಳುತ್ತಿದ್ದಾರೆ. ಪುಟ್ಟ ಹುಡುಗ ಸಮಯಪ್ರಜ್ಞೆಯಿಂದ ತನ್ನ ತಾಯಿಯ ಜೀವವನ್ನು ಉಳಿಸಿದ್ದಾನೆ. ಅಷ್ಟಕ್ಕೂ ಅವನೇನು ಮಾಡಿದ? ಹೇಗೆ ತನ್ನಮ್ಮನ ಜೀವ ಉಳಿಸಿದ ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಲಂಡನ್ನ ವೆಸ್ಟ್ ಮರ್ಸಿಯಾ ಪೊಲೀಸ್ ಫೇಸ್ಬುಕ್ನಲ್ಲಿ ಬಾಲಕನ ಬಗ್ಗೆ ಬರೆದುಕೊಂಡಿದ್ದಾರೆ. ಈ ಬಾಲಕನ ಹೆಸರು ಜೋಶ್. ಅಂದು ಮನೆಯಲ್ಲಿ ಅಮ್ಮ ಮತ್ತು ಸಹೋದರನೊಂದಿಗೆ ಇದ್ದ. ಆಗ ಅವನ ಅಮ್ಮ ಇದ್ದಕ್ಕಿದ್ದಂತೆ ಎಚ್ಚರ ತಪ್ಪಿ ಬಿದ್ದುಹೋದರು. ಅಷ್ಟು ಪುಟ್ಟ ಬಾಲಕನಾದರೂ ತನ್ನ ಬುದ್ಧಿ ಉಪಯೋಗಿಸಿ ಕೂಡಲೇ 112 ಕ್ಕೆ ಕರೆ ಮಾಡಿದ. (ಯುರೋಪ್ನಲ್ಲಿ ಎಮರ್ಜನ್ಸಿ ಸರ್ವೀಸ್ಗಾಗಿ ಇರುವ ಸಂಖ್ಯೆ 112) ಬಾಲಕನ ಮನೆಗೆ ಕೂಡಲೇ ದೌಡಾಯಿಸಿದ ಸಿಬ್ಬಂದಿ, ಅವನ ತಾಯಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಬಾಲಕ ತನ್ನ ಆಟದ ಆ್ಯಂಬುಲೆನ್ಸ್ ಮೇಲೆ 112 ಎಂದು ಬರೆದಿದ್ದನ್ನು ನೋಡಿದ್ದ ಹೊರತು, ಆತನಿಗೆ ಅದು ನಿಜಕ್ಕೂ ಎಮರ್ಜನ್ಸಿ ಸರ್ವೀಸ್ ನಂಬರ್ ಎಂಬುದೆಲ್ಲ ಗೊತ್ತಿರಲಿಲ್ಲ. ಇದನ್ನೂ ಓದಿ: ತನ್ನ ಎರಡೂ ಕಿವಿಯನ್ನು ಕತ್ತರಿಸಿ, ಭದ್ರವಾಗಿ ಜಾರ್ನಲ್ಲಿ ಇಟ್ಟವನ ತಲೆಬುರುಡೆ ನೋಡಿ…!
ಅದೇನೇ ಇರಲಿ..ತನ್ನ ಆಟಿಕೆ ಆ್ಯಂಬುಲೆನ್ಸ್ ಮೇಲೆ ಇದ್ದ ನಂಬರ್ಗೆ ಕರೆ ಮಾಡಬೇಕು ಎಂದು ಆ ಐದುವರ್ಷದ ಮಗುವಿಗೆ ಅರ್ಥವಾಯಿತಲ್ಲ ಎಂಬುದೇ ದೊಡ್ಡ ಅಚ್ಚರಿ ಎಂದು ಪೊಲೀಸರು ಬರೆದುಕೊಂಡಿದ್ದಾರೆ.
ಈ ವಿಷಯವನ್ನು ಓದಿದ ನೆಟ್ಟಿಗರಂತೂ ಬಾಲಕನ ಶೌರ್ಯ, ಸಮಯಪ್ರಜ್ಞೆಯನ್ನು ಸಿಕ್ಕಾಪಟೆ ಕೊಂಡಾಡುತ್ತಿದ್ದಾರೆ. ಹೊಗಳಿ ಕಾಮೆಂಟ್ಗಳನ್ನು ಬರೆಯುತ್ತಿದ್ದಾರೆ. (ಏಜೆನ್ಸೀಸ್)