

ಮುಲ್ತಾನ್: ಐದು ವರ್ಷದ ಪೋರನೊಬ್ಬ ಪಾಕಿಸ್ತಾನದ ಮುಖ್ಯರಸ್ತೆಯೊಂದರಲ್ಲಿ ಕಾರು ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಚಲಿಸುತ್ತಿರುವ ಕಪ್ಪು ಟೊಯೊಟಾ ಲ್ಯಾಂಡ್ ಕ್ರೂಸರ್ನ ಚಾಲಕನ ಸೀಟಿನಲ್ಲಿ ನಿಂತುಕೊಂಡು ಸ್ಟೇರಿಂಗ್ ವೀಲನ್ನು ಹಿಡಿದಿರುವ ಪುಟ್ಟ ಪೋರನ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ತಾಲ್ಹಾ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ "ಮುಲ್ತಾನಿನಲ್ಲಿ ಲ್ಯಾಂಡ್ ಕ್ರೂಸರ್ ಓಡಿಸುತ್ತಿರುವ ಚಿಕ್ಕ ಮಗು.. ಅವನ ಕಾಲು ಪೆಡಲ್ಲನ್ನು ಹೇಗೆ ತಲುಪುತ್ತಿದೆ? ಯಾರ ಮಗು ಇದು?" ಎಂದು ಬರೆದು ವಿಡಿಯೋ ಶೇರ್ ಮಾಡಿದ್ದಾರೆ.
ಮಾಧ್ಯಮವೊಂದರ ಮಾಹಿತಿ ಪ್ರಕಾರ ಬಾಲಕನು ಐದು ವರ್ಷದವನಾಗಿದ್ದು, ಪಾಕಿಸ್ತಾನದ ಮುಲ್ತಾನ್ ಪ್ರದೇಶದ ಅತಿ ಬಿಸಿಯಾದ ರಸ್ತೆಯಾದ ಬೋಸನ್ ಮಾರ್ಗದಲ್ಲಿ ಕಾರು ಓಡಿಸುತ್ತಿದ್ದಾನೆ.
ಈ ರೀತಿ ಬಾಲಕನಿಗೆ ಗಾಡಿ ಕೊಟ್ಟಿರುವ ಪಾಲಕರು ಯಾರೆಂಬ ಗಂಭೀರ ಪ್ರಶ್ನೆ ಎತ್ತಿರುವ ನೆಟ್ಟಿಗರು, "ಇದು ತಮಾಷೆಯಲ್ಲ, ಗಂಭೀರ ವಿಷಯ" ಎಂದಿದ್ದಾರೆ. ಒಬ್ಬರು "ಇದು ಪ್ರಾಂಕ್ ಮಾಡಲು ಮಾಡಿರುವ ಕೆಲಸವಾದರೂ ವಾಹನವನ್ನು ಜಪ್ತಿ ಮಾಡಿ, ಪಾಲಕರಿಗೆ ಶಿಕ್ಷೆ ವಿಧಿಸಬೇಕು" ಎಂದು ಕೋಪದಿಂದ ನುಡಿದಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ವಾಹನದ ಸಂಖ್ಯೆ ತಿಳಿದು, ಮಾಲೀಕನನ್ನು ಹುಡುಕಿ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)