

ಜೈಪುರ: 150 ಅಡಿ ಆಳದ ಬೋರ್ವೆಲ್ (Borewell) ಗುಂಡಿಗೆ ಐದು ವರ್ಷದ ಆರ್ಯನ್ ಕುಸಿದು ಬಿದ್ದಿದ್ದು, ಕುಟುಂಬಸ್ಥರ ಮಾಹಿತಿಯ ಮೇರೆಗೆ ಇದೀಗ ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ಕಾರ್ಯಾಚರಣೆ ತಂಡ ಬಾಲಕನನ್ನು ಜೀವಂತವಾಗಿ ಹೊರತರಲು ಹರಸಾಹಸ ಪಡುತ್ತಿದೆ. ಎರಡನೇ ದಿನಕ್ಕೆ ಕಾಲಿಟ್ಟಿರುವ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ಕ್ಯಾಮರಾ ಬಿಟ್ಟು, ಕಂದಮ್ಮನ ಚಲವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಜೈಪುರದ ದೌಸಾ ಜಿಲ್ಲೆಯಲ್ಲಿ ಬಾಲಕ ಬೋರ್‌ವೆಲ್‌ಗೆ ಬಿದ್ದ 13 ಗಂಟೆಗಳ ನಂತರ ಕ್ಯಾಮೆರಾ ಮೂಲಕ ಆತನ ಚಲನವಲನಗಳನ್ನು ಕೊನೆಯದಾಗಿ ಗಮನಿಸಿದ್ದೇವೆ ಎಂದು ರಕ್ಷಣಾ ಪಡೆ ತಿಳಿಸಿದೆ. ಸದ್ಯದ ಮಟ್ಟಿಗೆ ಬಾಲಕನಿಗೆ ಉಸಿರಾಡಲು ಬೇಕಿರುವ ಆಮ್ಲಜನಕವನ್ನು ಪೈಪ್ ಮೂಲಕ ಪೂರೈಸಲಾಗುತ್ತಿದೆ. ಹಗ್ಗ ಮತ್ತು ಇತರ ಕೆಲವು ಸಲಕರಣೆಗಳ ಸಹಾಯದಿಂದ ಮಗುವನ್ನು ಹೊರತೆಗೆಯುವ ಪ್ರಯತ್ನವೂ ನಡೆಯುತ್ತಿದೆ ಎಂದಿದ್ದಾರೆ.
ಬೋರ್ವೆಲ್ ಗುಂಡಿಯಷ್ಟೇ ಅಗಲ ಇರುವ ಮತ್ತೊಂದು ರಂಧ್ರವನ್ನು ಅಗೆಯುವ ಮೂಲಕ ಬಾಲಕನನ್ನು ಹೊರತರುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ಕಾಲಿಖಾಡ್ ಗ್ರಾಮದ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದ ಆರ್ಯನ್ ತೆರೆದ ಕೊಳವೆಬಾವಿಗೆ ಬಿದ್ದಿದ್ದಾನೆ. ನಿನ್ನೆ (ಡಿ.09) ಮಧ್ಯಾಹ್ನ 3 ಗಂಟೆಗೆ ಈ ಘಟನೆ ಸಂಭವಿಸಿದ್ದು, ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).