ದ್ವಿಚಕ್ರ ವಾಹನ ವಿಮೆಗೆ ಆನ್​ಲೈನ್​ ಮೊರೆ ಹೋಗ್ತೀರಾ? ಹಾಗಿದ್ರೆ ಈ 5 ವಿಷಯಗಳು ನಿಮಗೆ ಗೊತ್ತಿರಲಿ!

ವಿಜಯವಾಣಿ - 2024-11-29T133938.392
Published on

ನವದೆಹಲಿ: ಪ್ರಸ್ತುತ ಭಾರತದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ರಾರಾಜಿಸುತ್ತಿವೆ. ಅಧಿಕ ಸಂಖ್ಯೆಯಲ್ಲಿ ಬೈಕ್​, ಸ್ಕೂಟರ್​ಗಳ ಖರೀದಿಗಳು ಜೋರಾಗಿವೆ. ಒಳ್ಳೆಯ ವಾಹನ ತೆಗೆದುಕೊಳ್ಳುವಾಗ ಇರುವ ಆಸಕ್ತಿ, ಕೌತುಕ, ಜವಾಬ್ದಾರಿ ಸರಿಯಾದ ವಿಮೆಯನ್ನು ಹೊಂದುವಲ್ಲಿ ಇರುವುದಿಲ್ಲ. ಈ ಸಮಯ ಹೆಚ್ಚು ಪ್ರಾಮುಖ್ಯತೆಯನ್ನು ಸವಾರರು ತೋರುವುದಿಲ್ಲ. ನೀವು ಮೊದಲ ಬಾರಿ ಖರೀದಿದಾರರಾಗಿರಲಿ ಅಥವಾ ನಿಮ್ಮ ಪಾಲಿಸಿಯನ್ನು ನವೀಕರಿಸಲು ಬಯಸುತ್ತಿರಲಿ, ಆನ್‌ಲೈನ್‌ನಲ್ಲಿ ದ್ವಿಚಕ್ರ ವಾಹನ ವಿಮೆಯನ್ನು ಖರೀದಿಸುವುದು ಒಂದು ರೀತಿ ಕೆಲವರಿಗೆ ಆತಂಕವೇ.

ದ್ವಿಚಕ್ರ ವಾಹನವನ್ನು ಖರೀದಿಸುವವರು ತಮ್ಮ ಬೈಕ್​ ಅಥವಾ ಸ್ಕೂಟರ್​ಗೆ ವಿಮೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕೆಲವರು ಇದನ್ನು ಆಫ್​ಲೈನ್​ನಲ್ಲಿ ಮುಗಿಸಿಕೊಂಡರೆ, ಇನ್ನೂ ಕೆಲವರು ಆನ್​ಲೈನ್ ಮೊರೆ ಹೋಗ್ತಾರೆ. ಅದರಲ್ಲೂ ಪ್ರಸ್ತುತ ಡಿಜಿಟಲ್​ ಯುಗದಲ್ಲಿ ಆನ್​ಲೈನ್​ ಜಾಲವೇ ಸೂಕ್ತ ಎನ್ನುವ ಜನರು, ತಮ್ಮ ಮನೆಯಲ್ಲಿಯೇ ಕುಳಿತು, ವಿಮೆ ಪಡೆಯಲು ಮುಂದಾಗುತ್ತಾರೆ. ಅಸಲಿಗೆ ಆನ್​ಲೈನ್​ ಸೇಫಾ? ಪಡೆಯುವುದಾದರೆ ಹೇಗೆ ಪಡೆಯಬೇಕು ಮತ್ತು ಯಾವ ಟಿಪ್ಸ್​ ಅನುಸರಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ವಿವರಿಸಿದ್ದೇವೆ ಒಮ್ಮೆ ಕಣ್ಣಾಡಿಸಿ.

1. ಪಾಲಿಸಿ ಕವರೇಜ್​ ಪರಿಶೀಲಿಸಿ

ಪಾಲಿಸಿ ಥರ್ಡ್​ ಪಾರ್ಟಿ ಹೊಣೆಗಾರಿಕೆ, ವೈಯಕ್ತಿಕ ಅಪಘಾತಗಳು ಮತ್ತು ಸ್ವಂತ ಹಾನಿಯಂತಹ ಅಗತ್ಯ ಅಂಶಗಳನ್ನು ಒಳಗೊಂಡಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಅಪಘಾತ, ಕಳ್ಳತನ ಅಥವಾ ಬೆಂಕಿಯ ಹಾನಿಯವರೆಗೆ ವಿವಿಧ ಸನ್ನಿವೇಶಗಳಲ್ಲಿ ನಿಮಗೆ ರಕ್ಷಣೆ ಇದೆಯೇ ಎನ್ನುವುದನ್ನು ಸರಿಯಾಗಿ ಪರಿಶೀಲಿಸಿ.

2. ನಿಖರವಾದ ಮಾಹಿತಿ ಒದಗಿಸಿ

ವಿಮೆಯನ್ನು ಖರೀದಿಸುವಾಗ ನಿಮ್ಮ ವಾಹನ ಮತ್ತು ವೈಯಕ್ತಿಕ ಮಾಹಿತಿ ಕುರಿತು ಸರಿಯಾದ ವಿವರಗಳನ್ನು ಒದಗಿಸುವುದು ಅತೀ ಮುಖ್ಯ. ತಪ್ಪಾದ ವಿವರಗಳನ್ನು ಕೊಟ್ಟಿದ್ದೇ ಆದಲ್ಲಿ ವಿಮೆ ಪಡೆಯುವಾಗ ತೊಡಕುಗಳು ಎದುರಾಗಬಹುದು ಅಥವಾ ವ್ಯಾಪ್ತಿಯ ನಿರಾಕರಣೆಗೆ ಕಾರಣವಾಗಬಹುದು.

3. ನೋ-ಕ್ಲೈಮ್ ಬೋನಸ್‌

ಅನೇಕ ವಿಮಾದಾರರು ಕ್ಲೈಮ್‌ಗಳಿಲ್ಲದೆ ಸತತ ವರ್ಷಗಳವರೆಗೆ ನೋ-ಕ್ಲೈಮ್ ಬೋನಸ್ (NCB) ಅನ್ನು ನೀಡುತ್ತಾರೆ. ಭವಿಷ್ಯದ ನವೀಕರಣಗಳಲ್ಲಿ ಪ್ರೀಮಿಯಂಗಳನ್ನು ಉಳಿಸಲು ಈ ಬೋನಸ್ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಪಾಲಿಸಿಯು ಈ ಪ್ರಯೋಜನವನ್ನು ನೀಡುತ್ತದೆಯೇ ಎಂಬುದನ್ನು ಸರಿಯಾಗಿ ಚೆಕ್ ಮಾಡುವುದನ್ನು ಮರೆಯದಿರಿ.

4. ನವೀಕರಣ ಪ್ರಕ್ರಿಯೆ ಪರಿಶೀಲಿಸಿ

ವಿಮಾ ಪೂರೈಕೆದಾರರು ಸುಲಭವಾದ ಮತ್ತು ತೊಂದರೆ ಮುಕ್ತ ಪಾಲಿಸಿ ನವೀಕರಣ ಪ್ರಕ್ರಿಯೆಯನ್ನು ನೀಡುತ್ತಾರೆಯೇ ಎಂದು ಗಮನಿಸಿ. ಸರಾಗವಾದ ನವೀಕರಣ ಪ್ರಕ್ರಿಯೆಯು ನಿಮ್ಮ ಸಮಯ ಮತ್ತು ಓಡಾಡುವಿಕೆಯನ್ನು ಉಳಿಸುತ್ತದೆ ಹಾಗೂ ಕವರೇಜ್ ಕಳೆದುಹೋಗುವ ಬಗ್ಗೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ.

5. ಪಾಲಿಸಿ ದಾಖಲೆಗಳನ್ನು ಓದಿ

ಪಾಲಿಸಿ ಅಂತಿಮಗೊಳಿಸುವ ಮುನ್ನ ಯಾವಾಗಲೂ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಮತ್ತು ತಪ್ಪದೆ ಓದಿ. ಹೊರಗಿಡುವಿಕೆಗಳು, ಮಿತಿಗಳನ್ನು ಅರ್ಥಮಾಡಿಕೊಳ್ಳಿ. ಈ ಮೂಲಕ ಮುಂದೆ ನನಗೆ ಇದು ಗೊತ್ತೇ ಇರಲಿಲ್ಲವೇ? ಇದು ಹೇಗೆ ಸಾಧ್ಯ? ಎಂಬ ಆಶ್ಚರ್ಯಗಳಿಗೆ ಒಳಗಾಗುವುದನ್ನು ಈಗಲೇ ತಪ್ಪಿಸಿ. ಇದು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net