ರ‍್ಯಾಗಿಂಗ್​ ಪ್ರಕರಣದಡಿ ಐವರು ಅರೆಸ್ಟ್; ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸದಿರಲು ದಿಟ್ಟ ನಿರ್ಧಾರ! Ragging Case

ವಿಜಯವಾಣಿ - 2025-02-14T184522.132
Published on

Ragging Case: ಕೇರಳದ ಕೊಟ್ಟಾಯಂ ಜಿಲ್ಲೆಯ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೂನಿಯರ್​ ವಿದ್ಯಾರ್ಥಿಗಳ ಕೈ-ಕಾಲನ್ನು ಮಂಚಕ್ಕೆ ಕಟ್ಟಿ, ಅವರ ಖಾಸಗಿ ಅಂಗಗಳಿಗೆ ಡಂಬಲ್ಸ್​ ನೇತುಹಾಕಿ, ಕೈವಾರದಿಂದ ಚುಚ್ಚಿ ರ‍್ಯಾಗಿಂಗ್ ಮಾಡಿದ್ದ ಐವರು ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಇದೀಗ ಆ ಐವರನ್ನು ಕಾಲೇಜಿನಿಂದ ಕಿತ್ತು ಬಿಸಾಡಲು ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಫೆ.12ರಂದು ಐವರು ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ ಬಳಿಕ ಜೂನಿಯರ್​ಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದರ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಯಿತು. ವಿದ್ಯಾರ್ಥಿಗಳನ್ನು ಬೆತ್ತಲೆಯಾಗಿ ವಿವಸ್ತ್ರಗೊಳಿಸಿದ್ದಲ್ಲದೇ, ಅವರ ಖಾಸಗಿ ಅಂಗಗಳಿಗೆ ಡಂಬಲ್​ಗಳನ್ನು ನೇತುಹಾಕಿ ಕ್ರೂರವಾಗಿ ಹಿಂಸಿಸಿದ್ದಾರೆ. ಜತೆಗೆ ದೇಹದ ಕೆಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದ್ದಾರೆ. ಈ ವಿಷಯ ಜೂನಿಯರ್​ ವಿದ್ಯಾರ್ಥಿಗಳು ನೀಡಿದ್ದ ದೂರಿನಲ್ಲಿಯೂ ದಾಖಲಾಗಿದೆ.

ರ‍್ಯಾಗಿಂಗ್‌ಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಐದು ವಿದ್ಯಾರ್ಥಿಗಳನ್ನು ಈಗಾಗಲೇ ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ರ‍್ಯಾಗಿಂಗ್ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಿದ ಬೆನ್ನಲ್ಲೇ ಕಾಲೇಜು ಪ್ರಾಂಶುಪಾಲರು ಈ ಕ್ರಮ ಕೈಗೊಂಡಿದ್ದಾರೆ. ಸದ್ಯ ಪೊಲೀಸರ ಕಸ್ಟಡಿಯಲ್ಲಿರುವ ಐವರು ತೃತೀಯ ವರ್ಷದ ಆರೋಪಿ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಕಾಲೇಜು ಮೆಟ್ಟಿಲು ಹತ್ತದಂತೆ ನೋಡಿಕೊಳ್ಳಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಘಟನೆಯ ತನಿಖೆಗೆ ಆದೇಶಿಸಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರಾಜ್ಯ ಪೊಲೀಸರಿಂದ 10 ದಿನಗಳಲ್ಲಿ ವರದಿ ನೀಡುವಂತೆ ಕೇಳಿದೆ.

ಏನಿದು ಪ್ರಕರಣ?

ಸತತ ಮೂರು ತಿಂಗಳ ಕಾಲ ರ‍್ಯಾಗಿಂಗ್​ಗೆ ಒಳಗಾದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು, ಇತ್ತೀಚೆಗಷ್ಟೇ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ತೃತೀಯ ವರ್ಷದ ಐವರು ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಎನ್.ಎಸ್. ಜೀವಾ, ಕೆ.ಪಿ. ರಾಹುಲ್ ರಾಜ್, ಸಿ. ರಿಜಿಲ್ ಜಿತ್ ಮತ್ತು ವಿವೇಕ್ ಎನ್.ಪಿ. ಬಂಧನಕ್ಕೆ ಒಳಗಾದ ವಿದ್ಯಾರ್ಥಿಗಳು. ಅವರ ವಿಚಾರಣೆ ನಂತರ ರ‍್ಯಾಗಿಂಗ್ ಪ್ರಕರಣ ಈಗ ಸಂಪೂರ್ಣವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಐವರು 2024ರ ನವೆಂಬರ್​ನಿಂದ 2025ರ ಜನವರಿ ವರೆಗೂ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್​ ಹೆಸರಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಸೀನಿಯರ್​ಗಳ ವಿಪರೀತ ಕಿರುಕುಳವನ್ನು ಸಹಿಸಲಾಗದ ಮೂವರು ಪ್ರಥಮ ವರ್ಷದ ವಿದ್ಯಾರ್ಥಿಗಳು, ಹತ್ತಿರದ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬಳಿಕವೇ ಆರೋಪಿಗಳ ಹಿಂಸಾತ್ಮಕ ಕೃತ್ಯಗಳು ತನಿಖೆಯಲ್ಲಿ ಬಯಲಾಗಿದೆ. ಈ ಘಟನೆಯ ವಿಡಿಯೋಗಳು ಇದೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net