

ಮಂಗಳೂರು: ಕರಾವಳಿಯಲ್ಲಿ ಭಾನುವಾರ 5 ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಕೋವಿಡ್-19 ಚೆಕ್ಪೋಸ್ಟ್, ಹೈವೇ ಪ್ಯಾಟ್ರೋಲ್, ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸಿದ್ದ ಕಾನ್ಸ್ಟೆಬಲ್ಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಒಂದೇ ಕಟ್ಟಡದಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ ಸಹಿತ ಗ್ರಾಮಾಂತರ ಮತ್ತು ನಗರ ಠಾಣೆ, ಅಜೆಕಾರು, ಬ್ರಹ್ಮಾವರ ಠಾಣೆಯನ್ನು 48 ಗಂಟೆಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿರುವ ಕಾರಣ ವಿಟ್ಲ ಠಾಣೆಯನ್ನೂ ಸೀಲ್ಡೌನ್ ಮಾಡಲಾಗಿದೆ.
ಮೊಬೈಲ್ನಿಂದ ಹರಡಿತೇ?
ಮುಂಬೈನಿಂದ ಸೋಂಕಿತ ಯುವಕ ಮೇ 14ರಂದು ವಿಟ್ಲಕ್ಕೆ ಬಂದಿದ್ದ. ಹೆಡ್ಕಾನ್ಸ್ಟೆಬಲ್ ಒಬ್ಬರು ಆತನ ಆಧಾರ್ ಪಡೆದಿದ್ದರು. ಆ ಬಳಿಕ ಸದ್ಯ ಸೋಂಕಿಗೆ ಒಳಗಾಗಿರುವ ಕಾನ್ಸ್ಟೆಬಲ್ನಿಂದ ಹೆಡ್ ಕಾನ್ಸ್ಟೆಬಲ್ ಮೊಬೈಲ್ ಪಡೆದುಕೊಂಡಿದ್ದು, ಆಧಾರ್ ಮುಟ್ಟಿದ ಕೈನಲ್ಲೇ ಅದನ್ನೂ ಮುಟ್ಟಿದ್ದರು. ಆ ಬಳಿಕ ತಮ್ಮ ಮೊಬೈಲ್ ಬಳಕೆ ಮಾಡಿದ್ದ ಪೇದೆಗೆ ಸೋಂಕು ತಗುಲಿದೆ. ನೇರ ಸಂಪರ್ಕ ಹೊಂದಿದ್ದ ಸಿಬ್ಬಂದಿಯ ವರದಿ ನೆಗೆಟಿವ್ ಆಗಿದೆ.