

ನವದೆಹಲಿ: 2020ರ ಕೇಂದ್ರ ಬಜೆಟ್ ಮಂಡನೆಯಾದ ಮೇಲೆ ತಿಳಿಯಬೇಕಾದ 5 ಹೊಸ ತೆರಿಗೆ ನಿಯಮಗಳು ಹೀಗಿವೆ.
ವಾರ್ಷಿಕವಾಗಿ 15 ಲಕ್ಷ ರೂಪಾಯಿ ಆದಾಯ ಇರುವವರಿಗೆ ಹೊಸ ಆದಾಯ ತೆರಿಗೆ ದರಗಳು ಅನ್ವಯವಾಗಲಿವೆ. ಈ ಹೊಸ ತೆರಿಗೆ ದರಗಳು ಐಚ್ಛಿಕವಾಗಿದ್ದು, ವಿನಾಯಿತಿಗಳು ಮತ್ತು ಕಡಿತಗಳಿಗೆ ಅನ್ವಯಿಸುತ್ತವೆ. ಈ ಹೊಸ ನಿಯಮಗಳು 2020-21 ಆರ್ಥಿಕ ವರ್ಷದಿಂದ ಅನ್ವಯವಾಗಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
1. ತೆರಿಗೆ ವಿನಾಯಿತಿ ಮತ್ತು ಕಡಿತಗಳನ್ನು ಬಿಟ್ಟುಕೊಡುವ ಗಳಿಕೆದಾರರಿಗೆ ಈ ಹೊಸ ಆದಾಯ ತೆರಿಗೆ ದರಗಳು ಅನ್ವಯವಾಗುತ್ತವೆ. ವಿಶೇಷ ರಿಯಾಯಿತಿ ಸೇರಿದಂತೆ ಸೆಕ್ಷನ್ 80ಸಿ, ಸೆಕ್ಷನ್ 80 ಡಿ, ಎಲ್ಟಿಎ, ಎಚ್ಆರ್ಎ, ಮನೆ ಸಾಲ ಉಳ್ಳವರಿಗೆ ರಿಯಾಯಿತಿಗಳಿವೆ.
ಇದರ ಗರಿಷ್ಠ ಮಟ್ಟ 78 ಸಾವಿರ ರೂಪಾಯಿಗಳವರೆಗೆ ಮಾತ್ರ. ವೈಯಕ್ತಿಕ ತೆರಿಗೆಗಳು ಹಳೆಯ ರೀತಿಯಲ್ಲಿಯೇ ಮುಂದುವರಿಯಲಿವೆ. ವ್ಯವಹಾರ ಆದಾಯ ಹೊಂದಿರುವ ವ್ಯಕ್ತಿಗಳು ಹೊಸ ತೆರಿಗೆ ದರಗಳಿಗೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಇತರರಿಗೆ ಸಾಧ್ಯವಿದೆ.
ಹೊಸ ತೆರಿಗೆ ನಿಯಮಗಳು
0ದಿಂದ 5 ಲಕ್ಷದವರೆಗೆ ತೆರಿಗೆ ವಿನಾಯಿತಿ
5ಲಕ್ಷದಿಂದ 7.5ಲಕ್ಷದವರೆಗೆ ಶೇ.10 (ಮೊದಲು ಶೇ.20)
7.5ಲಕ್ಷದಿಂದ 10ಲಕ್ಷದವರೆಗೆ ಶೇ.15 (ಮೊದಲು ಶೇ.30)
10ಲಕ್ಷದಿಂದ 12.5ಲಕ್ಷದವರೆಗೆ ಶೇ.20 (ಮೊದಲು ಶೇ.30)
12.5ಲಕ್ಷದಿಂದ 15ಲಕ್ಷದವರೆಗೆ ಶೇ.25 (ಮೊದಲು ಶೇ.30)
15 ಲಕ್ಷ ಮತ್ತು ಮೇಲ್ಪಟ್ಟ ಆದಾಯ ಉಳ್ಳವರಿಗೆ ತೆರಿಗೆಯಲ್ಲಿ ಬದಲಾವಣೆ ಇರುವುದಿಲ್ಲ.
2. ಕಂಪನಿಗಳು ತನ್ನ ಷೇರುದಾರರಿಗೆ ವಿತರಿಸುವ ಲಾಭಾಂಶದಲ್ಲಿ ತೆರಿಗೆಯನ್ನು (ಡಿಡಿಟಿ) ಶೇ.15 ಪಾವತಿಸಬೇಕಾಗುತ್ತದೆ. ಇದು ಕಂಪನಿಯ ಲಾಭಾಂಶದ ಮೇಲೆ ನೀಡಬೇಕಾದ ತೆರಿಗೆ. ಹೊಸ ನಿಯಮಗಳ ಪ್ರಕಾರ, ಲಾಭಾಂಶವನ್ನು ಸ್ವೀಕರಿಸುವವರಿಗೆ ತೆರಿಗೆ ವಿಧಿಸಲಾಗುತ್ತದೆ. ಈ ಮೊದಲು, 10 ಲಕ್ಷಕ್ಕಿಂತ ಹೆಚ್ಚಿನ ಲಾಭಾಂಶ ಆದಾಯವನ್ನು ಸ್ವೀಕರಿಸುವವರಿಗೆ ತೆರಿಗೆ ವಿಧಿಸಲಾಗುತ್ತಿತ್ತು.
3. ಹೊಸ ಮನೆಗಳ ಖರೀದಿಗೆ ಹೆಚ್ಚುವರಿ ತೆರಿಗೆ ಪಾವತಿಸಲು ಒಂದು ವರ್ಷ ಅವಕಾಶವಿದೆ. ಈ ಅವಧಿಯನ್ನು 31 ಮಾರ್ಚ್ 2021ರವರೆಗೆ ವಿಸ್ತರಿಸಲಾಗಿದೆ. 45 ಲಕ್ಷ ರೂಪಾಯಿ ಮೌಲ್ಯದ ಮನೆ ಖರೀದಿಸಲು ಸಾಲ ಪಡೆದವರು, 1.5 ಲಕ್ಷ ರೂಪಾಯಿ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿರುತ್ತಾರೆ.
4. ಹೆಚ್ಚು ಆದಾಯ ಗಳಿಸುವವರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಮತ್ತು ಸೂಪರ್‌ನ್ಯೂನೇಷನ್ ಫಂಡ್ ಅಡಿಯಲ್ಲಿ ಮಾಲೀಕರು ನೀಡುವ ಕೊಡುಗೆಗೆ ತೆರಿಗೆ ಪಾವತಿಸಬೇಕಾಗುತ್ತದೆ.
5. ಕಂಪನಿಯಿಂದ ಪಡೆಯಲಾಗುವ ಸಂಚಿತ ಮೊತ್ತವು 7.5 ಲಕ್ಷ ರೂಪಾಯಿ ಮೀರಿದರೆ ಈಗಾಗಲೇ ಪಾವತಿಸುವ ತೆರಿಗೆಯಲ್ಲದೆ, ಬಡ್ಡಿ ಅಥವಾ ಲಾಭಾಂಶದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. (ಏಜೆನ್ಸೀಸ್)