ರಿಲಯನ್ಸ್ ಪವರ್​ನ ಕಲ್ಲಿದ್ದಲು ವಿದ್ಯುತ್​ ಸ್ಥಾವರದಲ್ಲಿ ಅವಘಡ; ವಿಷಕಾರಿ ತ್ಯಾಜ್ಯ ಸೋರಿಕೆ, ಮನೆಯಲ್ಲಿ ಇದ್ದ ಐವರು ನಾಪತ್ತೆ

Singrouli
Published on

ಸಿಂಗ್ರೌಲಿ: ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ರಿಲಯನ್ಸ್​ ಪವರ್​ ಮಾಲೀಕತ್ವದ ಕಲ್ಲಿದ್ದಲು ವಿದ್ಯುತ್​ ಸ್ಥಾವರದಲ್ಲಿ ನಡೆದ ಅವಘಡದಲ್ಲಿ ಐವರು ನಾಪತ್ತೆಯಾಗಿದ್ದಾರೆ.

ವಿದ್ಯುತ್​ ಸ್ಥಾವರದ ವಿಷಕಾರಿ ತ್ಯಾಜ್ಯಗಳನ್ನು ಸಂಗ್ರಹಿಸುವ ಕೃತಕ ಕೊಳದ ಕಟ್ಟೆ ಒಡೆದು, ಅದರಲ್ಲಿದ್ದ ವಿಷಯುಕ್ತ ವಸ್ತು ಸುತ್ತಲಿನ ಸ್ಥಳಕ್ಕೆ ಹರಿದಿದೆ. ವಿದ್ಯುತ್​ ಸ್ಥಾವರದ ಸುತ್ತಮುತ್ತ ವಿಷತ್ಯಾಜ್ಯವುಳ್ಳ ಕೆಸರು ಆವರಿಸಿದೆ.

ಈ ತ್ಯಾಜ್ಯಗುಂಡಿಯ ಸಮೀಪವೇ ಇದ್ದ ಮನೆಯಲ್ಲಿ ವಾಸವಾಗಿದ್ದ ಐವರು ಸದ್ಯ ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿ ಆಸುಪಾಸಿನಲ್ಲಿದ್ದ ಬೆಳೆಗೂ ಅಪಾರ ಹಾನಿಯುಂಟಾಗಿದೆ ಎಂದು ಸಿಂಗ್ರೌಲಿ ಜಿಲ್ಲಾಧಿಕಾರಿ ಕೆ.ವಿ.ಎಸ್​.ಚೌಧರಿ ತಿಳಿಸಿದ್ದಾರೆ. ಕಾಣೆಯಾದವರನ್ನು ಶೀಘ್ರವೇ ಹುಡುಕಲಾಗುವುದು. ಬೆಳೆನಷ್ಟ ಪರಿಹಾರವನ್ನೂ ಸಂಬಂಧಪಟ್ಟ ರೈತರಿಗೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಗುಂಡಿಯ ಕಟ್ಟೆಯೊಡೆದು ವಿಷತ್ಯಾಜ್ಯಗಳು ಹೊರಗೆ ಬಂದು ಎಲ್ಲೆಡೆ ಹರಿಯುತ್ತಿರುವ ಫೋಟೋ, ವಿಡಿಯೋಗಳನ್ನು ಸ್ಥಳೀಯರು ವೈರಲ್​ ಮಾಡಿದ್ದಾರೆ.

ಭೋಪಾಲ್​ದಿಂದ 680 ಕಿ.ಮೀ.ದೂರದಲ್ಲಿರುವ ಈ ಕಲ್ಲಿದ್ದಲು ವಿದ್ಯುತ್​ ಸ್ಥಾವರದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಮೂರನೇ ಅವಘಡ ಇದಾಗಿದ್ದು, ರಿಲಯನ್ಸ್​ ಪವರ್​ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 21,000 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನಾ ಸಾಮರ್ಥ್ಯವುಳ್ಳ ಈ ಕಲ್ಲಿದ್ದಲು ವಿದ್ಯುತ್​ ಸ್ಥಾವರಗಳು ವಿಪರೀತ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಘಾಜಿಯಾಬಾದ್​ ಬಿಟ್ಟರೆ ಸಿಂಗ್ರೌಲಿಯೇ ಅತಿ ಹೆಚ್ಚು ಮಾಲಿನ್ಯಕ್ಕೆ ಒಳಗಾದ ಕೈಗಾರಿಕಾ ಪ್ರದೇಶ. ಅದಕ್ಕೆ ಕಾರಣ ಈ ವಿದ್ಯುತ್ ಸ್ಥಾವರ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net