

ನವದಹೆಲಿ: ಡೆಲ್ಫ್ಟ್ ದ್ವೀಪದ ಬಳಿ ಶ್ರೀಲಂಕಾ ನೌಕಾಪಡೆ ನಡೆಸಿದ ಗುಂಡಿನ ದಾಳಿಯಲ್ಲಿ(SriLankan Navy Firing) ಐವರು ಭಾರತೀಯ ಮೀನುಗಾರರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನು ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಕ್ರಮದ ವಿಚಾರವಾಗಿ ಶ್ರೀಲಂಕಾದ ಹಾಲಿ ಹೈಕಮಿಷನರ್ ಅವರನ್ನು ಕರೆಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯಾವುದೇ ಸಂದರ್ಭದಲ್ಲೂ ಬಲದ ಬಳಕೆಯು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಅಲ್ಲದೆ ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ಶ್ರೀಲಂಕಾದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಹೇಳಲಾಗಿದೆ.
ಮಂಗಳವಾರ ಮುಂಜಾನೆ ಕಾರೈಕಲ್ ಬಂದರಿನಿಂದ ಡೆಲ್ಫ್ಟ್ ದ್ವೀಪದ ಬಳಿ ಮೀನುಗಾರಿಕೆಗೆ ತೆರಳಿದ್ದ 13 ಭಾರತೀಯ ಮೀನುಗಾರರನ್ನು ಸಮುದ್ರ ಗಡಿ ದಾಟಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಹೇಳಿದೆ. ಈ ವೇಳೆ ಶ್ರೀಲಂಕಾ ನೌಕಾಪಡೆಯಿಂದ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಎಂಇಎ ವಿವರಿಸಿದೆ.
ಮೀನುಗಾರಿಕೆ ದೋಣಿಯಲ್ಲಿದ್ದ 13 ಮೀನುಗಾರರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಪ್ರಸ್ತುತ ಜಾಫ್ನಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದೇ ಹಡಗಿನಲ್ಲಿದ್ದ ಇನ್ನೂ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂಇಎ ತಿಳಿಸಿದೆ. ಅಲ್ಲದೆ ಜಾಫ್ನಾದಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಗಾಯಗೊಂಡ ಮೀನುಗಾರರನ್ನು ಭೇಟಿ ಮಾಡಿ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)