

ಬೆಂಗಳೂರು: ಸಾಕು ಮತ್ತು ಕಾಡು ಪ್ರಾಣಿಗಳಿಗೆ ವಿಷ ಹಾಕಿ ಕೊಲ್ಲುವ ಕೃತ್ಯ ರಾಜಧಾನಿಯಲ್ಲಿ ಮುಂದುವರಿದಿದೆ. ಸೋಮವಾರ ಜೆ.ಪಿ. ನಗರದ ಎಂ.ಎಸ್. ರಾಮಯ್ಯ ಸಿಟಿಯಲ್ಲಿ ವಿಷಾಹಾರ ಸೇವಿಸಿ 5 ನಾಯಿಗಳು ಮೃತಪಟ್ಟಿವೆ.
9 ನಾಯಿಗಳು ವಿಷಾಹಾರ ಸೇವಿಸಿದ್ದು. ಅದರಲ್ಲಿ 5 ನಾಯಿಗಳು ಮೃತಪಟ್ಟಿವೆ. 4 ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ಪಾಲಿಕೆಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರು. ಮಕ್ಕಳು ಶಾಲೆಗೆ ಹೋಗುವಾಗ ಕಚ್ಚುತ್ತವೆ, ರಾತ್ರಿ ವೇಳೆ ಬೊಗಳುತ್ತಿರುತ್ತವೆ. ವಾಹನಗಳಿಗೆ ಅಡ್ಡ ಬರುತ್ತವೆ ಎಂಬ ಹಿನ್ನೆಲೆಯಲ್ಲಿ ವಿಷ ಹಾಕಿರುವ ಅನುಮಾನ ವ್ಯಕ್ತವಾಗಿದೆ.
4 ದಿನಗಳ ಹಿಂದೆ ಕೋತಿಗಳಿಗೆ ವಿಷ: ಬಸವನಗುಡಿಯ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಬಳಿ ಅಸ್ವಸ್ಥಗೊಂಡು 2 ಕೋತಿಗಳು ಗುರುವಾರ ಮೃತಪಟ್ಟಿದ್ದವು. ಸ್ಥಳೀಯರೇ 30 ಕೋತಿಗಳಿಗೆ ಇಲಿ ಪಾಷಾಣ ಇಟ್ಟಿದ್ದಾರೆಂಬ ಶಂಕೆ ವ್ಯಕ್ತವಾಗಿತ್ತು. ಅಸ್ವಸ್ಥಗೊಂಡಿದ್ದ ಕೋತಿಗಳಿಗೆ ನೀರು ಕುಡಿಸಿದ ಪರಿಣಾಮ ಕೆಲವು ಬದುಕುಳಿದಿದ್ದವು. ಕೋತಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಗೆ ಕಳೇಬರ ಕಳುಹಿಸಲಾಗಿದ್ದು, ವರದಿಗೆ ಕಾಯುತ್ತಿರುವುದಾಗಿ ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.
ಗುಂಡು ಹಾರಿಸಿದ್ದ ವ್ಯಕ್ತಿ: ಮನೆಯ ಮುಂದೆ ಬೀದಿನಾಯಿ ಗಲೀಜು ಮಾಡುತ್ತಿದೆ ಎಂದು ಕಳೆದ ನವೆಂಬರ್ನಲ್ಲಿ ಜಯನಗರದಲ್ಲಿ ವ್ಯಕ್ತಿಯೊಬ್ಬ ಏರ್ಗನ್ನಿಂದ ಗುಂಡು ಹಾರಿಸಿ ನಾಯಿಯನ್ನು ಸಾಯಿಸಲು ಪ್ರಯತ್ನಿಸಿದ್ದ.
ವಿಷಾಹಾರ ನೀಡಿರುವ ಶಂಕೆ
ನಾಯಿಗಳಿಗೆ ಬೆಳಗ್ಗೆ ಆಹಾರ ಹಾಕುವಾಗ ವಿಷ ಬೆರೆಸಲಾಗಿದೆ. ಆ ಆಹಾರ ಸೇವಿಸಿದ ನಾಯಿಗಳ ಪೈಕಿ ಕೆಲವು ಸತ್ತಿವೆ. ನಾಯಿ ಕಳೇಬರದ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಫೋರೆನ್ಸಿಕ್) ರವಾನಿಸಲಾಗಿದೆ. ವಿಷಾಹಾರ ಇಟ್ಟಿರುವ ಕುರಿತು ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಪಾಲಿಕೆ ಪಶು ಸಂಗೋಪನೆ ವಿಭಾಗದ ವೈದ್ಯಾಧಿಕಾರಿ ಡಾ.ಶಶಿಕುಮಾರ್ ತಿಳಿಸಿದ್ದಾರೆ.
ಬೀದಿನಾಯಿಗಳಿಗೆ ವಿಷ ಹಾಕಿರುವ ಪ್ರಕರಣ ಖಂಡನೀಯ. ಸ್ಥಳೀಯರೇ ವಿಷ ಹಾಕಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. | ಬಿ.ಎಚ್. ಅನಿಲ್ ಕುಮಾರ್ ಬಿಬಿಎಂಪಿ ಆಯುಕ್ತ