

ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿದ್ದ ಷೇರು ಮಾರ್ಕೆಟ್ ಜಾಹೀರಾತು ಗಮನಿಸಿ 5.02 ಕೋಟಿ ರೂ. ಹೂಡಿಕೆ ಮಾಡಿ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿದ್ದಾರೆ.
ಬನಶಂಕರಿ 3ನೇ ಹಂತದ ನಿವಾಸಿ ರಂಜಿತ್ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು, ಆರೋಪಿಗಳಾದ ತುಶೀತ್, ಮಂಗುಕಿಯಾ, ಜುಹಿ ವಿ. ಪಾಟೀಲ್ ಮತ್ತು ಜಡೇಜಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ನ. 24ರಂದು ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಸಲುವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅರ್ಹ ಕಂಪನಿ ಬಗ್ಗೆ ಸರ್ಚ್ ಮಾಡುತ್ತಿದ್ದಾಗ ಮಾರವಾಡಿ ೈನಾನ್ಸ್ ಸರ್ವಿಸ್ ಎಂಬ ವೆಬ್‌ಸೈಟ್ ಗಮನಕ್ಕೆ ಬಂದಿತ್ತು. ಅದರ ಮೇಲೆ ಕ್ಲಿಕ್ ಮಾಡಿದಾಗ ತುಶೀತ್ ಸೇರಿ ಇನ್ನಿತರ ವ್ಯಕ್ತಿಗಳ ಸಂಪರ್ಕ ಲಭ್ಯವಾಗಿದ್ದು, ಅಲ್ಲಿಂದ ಮಾರವಾಡಿ 606 ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದರು. ಇದಾದ ಮೇಲೆ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದರ ಸಂಬಂಧ ತರಬೇತಿ ನೀಡಿ, ಬಳಿಕ ಹೂಡಿಕೆಗೆ ಆಸಕ್ತಿ ಇರುವರು ಸೆಕ್ಯುರಿಟಿ ಇನ್‌ಸ್ಟೂಟ್ ಖಾತೆ ತೆರೆಯಬೇಕೆಂದು ಅಪ್ಲಿಕೇಷನ್ ಲಿಂಕ್ ಕಳುಹಿಸಿದ್ದರು.
ಈಗಾಗಲೆ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆಗೆ ಆಸಕ್ತಿ ಹೊಂದಿದ್ದ ರಂಜಿತ್, 2024ರ ಡಿ.26ರಿಂದ ಎಂಎಸ್‌ಟಿಕೆ ಮಾರವಾಡಿ ಸೆಕ್ಯೂರಿಟಿ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಹೂಡಿಕೆ ಶುರು ಮಾಡಿದ್ದರು. ಹಂತ ಹಂತವಾಗಿ ಜ.8ರವರೆಗೂ 5.02 ಕೋಟಿ ರೂ. ಹೂಡಿಕೆ ಮಾಡಿದ್ದು, ಇದಕ್ಕೆ ಲಾಭಾಂಶ ಎಲ್ಲವೂ ಸೇರಿ 12.93 ಕೋಟಿ ರೂ. ಗಳಿಸಿರುವುದಾಗಿ ಸೈಬರ್ ಕಳ್ಳರು ಆಸೆ ಹುಟ್ಟಿಸಿದ್ದರು. ಮತ್ತೊಂದೆಡೆ, ಬಂಡವಾಳ ಹೂಡಿಕೆ ಮಾಡುವ ಉದ್ದೇಶದಿಂದ ರಂಜಿತ್, ಹೂಡಿಕೆಯಿಂದ ಬಂದಿದ್ದ ಲಾಭಾಂಶವನ್ನು ವಿತ್‌ಡ್ರಾ ಮಾಡಲು ಮುಂದಾದರು. ಆಗ ಸೇವಾ ಶುಲ್ಕ ಪಾವತಿ ಮಾಡಬೇಕೆಂದು ಷರತ್ತು ವಿಧಿಸಿ ಹಣ ವರ್ಗಾವಣೆ ಮಾಡಲಿಲ್ಲ. ಎಲ್ಲ ಹಣವನ್ನು ವಾಪಸ್ ಪಡೆಯಲು ಪ್ರಯತ್ನ ಮಾಡಿದಾಗ ಆರೋಪಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ರಂಜಿತ್, ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.