ಇ.ಡಿಯಿಂದ 5.87 ಕೋಟಿ ಮುಟ್ಟುಗೋಲು

Crime 26
Published on


ಬೆಂಗಳೂರು : ನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ನಡೆಸುತ್ತಿದ್ದ ವಿವಿಧ ಕಂಪನಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದ್ದ 5.87 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಆನ್‌ಲೈನ್/ಗ್ಯಾಂಬ್ಲಿಂಗ್, ಬೆಟ್ಟಿಂಗ್ ಸೇರಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ನಿರ್ದೇಶಕರು (ಡಿಜಿಜಿಐ) ಕಚೇರಿಗೆ ಬಂದ ದೂರಿನನ್ವಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ಆರೋಪವಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಕೆಲ ಕಂಪನಿಗಳು ಸಾರ್ವಜನಿಕರಿಗೆ ವಂಚನೆ ಎಸಗುತ್ತಿದ್ದವು. ಕಂಪನಿಯನ್ನು ಸೃಷ್ಟಿಸಿದ್ದ ಆರೋಪಿಗಳಾದ ಎನ್.ಶ್ಯಾಮಲಾ ಹಾಗೂ ಉಮರ್ ಪಾರೂಕ್ ಬೇರೆ ಬೇರೆ ವ್ಯಕ್ತಿಗಳ ದಾಖಲಾತಿಗಳನ್ನು ಬಳಸಿ ವಿವಿಧ ಹೆಸರುಗಳಲ್ಲಿ ಆ ಕಂಪನಿಗಳನ್ನು ತೆರೆದಿರುವುದು ಮತ್ತು ಕಂಪನಿಯ ಎಚ್.ಆರ್. ಮ್ಯಾನೇಜರ್ ಅನೇಕ ಸಿಮ್ ಕಾರ್ಡ್‌ಗಳನ್ನ ಖರೀದಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಅವುಗಳನ್ನು ಲಿಂಕ್ ಮಾಡಿರುವುದು ಇ.ಡಿ ತನಿಖೆಯಲ್ಲಿ ಬಯಲಾಗಿತ್ತು.
ರಾಕ್‌ಸ್ಟಾರ್ ಇಂಟರಾಕ್ಟಿವ್, ಇಂಡೀ ವರ್ಲ್ಡ್ ಸ್ಟುಡಿಯೋ, ಫಾಲ್ಕನ್ ಎಂಟರ್‌ಟೈನ್‌ಮೆಂಟ್ ಏಜೆನ್ಸೀಸ್, ದಿ ನೆಕ್ಸ್‌ಟ್ ಲೆವೆಲ್ ಟೆಕ್ನಾಲಾಜಿ, ರ್‌ಟಿ ಗೇಮರ್ ಟೆಕ್ನಾಲಾಜಿಸ್, ರಿಯಾಲಿಟಿ ಕೋಡ್ ಟೆಕ್ನಾಲಾಜಿ, ಟೆನೆಸ್ ಸಲ್ಯೂಷನ್, ಎಲೆಕ್ಟ್ರಾನಿಕ್ ವರ್ಚುವಲ್ ಸಲ್ಯೂಷನ್, ಝಜಾಗೊ ಸಿಸ್ಟಮ್ಸ್, ಜಿಂಗಾ ಇಂಟರಾಕ್ಟಿವ್, ವೇಲ್ ಬೈಟ್ಸ್ ಟೆಕ್ನಾಲಜಿ ಸೇರಿ ಹಲವು ಕಂಪನಿಗಳನ್ನು ಸಾರ್ವಜನಿಕರಿಗೆ ವಂಚಿಸುವ ಉದ್ದೇಶದಿಂದ ರಚಿಸಲಾಗಿತ್ತು. ಬೆಸ್ಟ್‌ಟೆಕ್, ಖೆಲೋ೨೪ಬೆಟ್ ಮತ್ತು ಬೆಟಿನೆಕ್ಸ್‌ಚೇಂಜ್ ಎಂಬ ವೆಬ್ ಸೈಟ್‌ಗಳ ಮೂಲಕ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net