ಉದ್ಯಮಿಗೆ 5.75 ಕೋಟಿ ರೂ. ವಂಚನೆ; ಮೂವರ ಸೆರೆ

arrested
Published on

ಬೆಂಗಳೂರು: ಜನಪ್ರತಿನಿಧಿಗಳ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಮಹಿಳೆ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ರೇಖಾ (38), ಆಕೆಯ ಪತಿ ಮಂಜುನಾಥ ಚಾರಿ (40) ಮತ್ತು ಸ್ನೇಹಿತ ಚೇತನ್ (35) ಬಂಧಿತರು. ಇತ್ತೀಚೆಗೆ ನಿಸಾರ್ ಅಹ್ಮದ್ ಎಂಬಾತನಿಗೆ 5.75 ಕೋಟಿ ರೂ. ವಂಚಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಬ್ಯಾಂಕ್ ಮತ್ತು ಫೈನಾನ್ಸ್‌ಗಳ ಸಂಪರ್ಕ ಹೊಂದಿದ್ದ ರೇಖಾ, ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ದೂರುದಾರ ನಿಸಾರ್ ಅಹ್ಮದ್ ಸಾಲ ಪಡೆಯಲು ಈಕೆಯ ಸಂಪರ್ಕ ಮಾಡಿದ್ದ. ಆಗ ಅವರ ಬಳಿ ಕೋಟ್ಯಂತರ ರೂ. ಇರುವ ವಿಚಾರ ಗೊತ್ತಾಗಿತ್ತು. ‘2009ರಲ್ಲಿ ನಡೆದಿದ್ದ ಕಾರ್ಲ್‌ಟನ್ ಟವರ್ ಬೆಂಕಿ ದುರಂತದಲ್ಲಿ ನಾನು ಪ್ರತ್ಯಕ್ಷ್ಯ ಸಾಕ್ಷಿಯಾಗಿದ್ದೇನೆ. ಆದರೆ, ಸಾಕ್ಷಿ ಹೇಳದಂತೆ ಮಾಲೀಕ ಹಾಗೂ ಇತರರು 25 ಕೋಟಿ ರೂ. ಜಮೆ ಮಾಡಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ನಾನು ತೆರಿಗೆ ಪಾಪತಿ ಮಾಡಬೇಕಿದೆ. ನೀವು 1 ಕೋಟಿ ರೂ. ಕೊಟ್ಟರೆ, 5 ಕೋಟಿ ರೂ. ಮರಳಿಸುತ್ತೇನೆ’ ಎಂದು ನಿಸಾರ್‌ಗೆ ರೇಖಾ ಆಮಿಷವೊಡ್ಡಿದ್ದಳು.

ಅದನ್ನು ನಂಬಿದ ನಿಸಾರ್, 5.75 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಆ ಹಣ ವಾಪಸ್ ಕೇಳಿದಾಗ ಪ್ರಾಣ ಬೆದರಿಕೆ ಹಾಕಿದ್ದಳು. ಈ ಸಂಬಂಧ ನಿಸಾರ್ ಅಹ್ಮದ್ ಕೊಟ್ಟ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೆ ರೀತಿ ಬೆಂಗಳೂರು, ಆಂಧ್ರ ಸೇರಿ ವಿವಿಧೆಡೆ 80ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯಿದೆ. ಈಕೆಯ ಪ್ರತಿ ವಂಚನೆಗೆ ಪತಿ ಮಂಜುನಾಥ್ ಚಾರಿ, ಚೇತನ್ ಸಹಕಾರ ನೀಡುತ್ತಿದ್ದರು. ಉತ್ತರ ಕರ್ನಾಟಕ ಮೂಲದ ಮಾಜಿ ಶಾಸಕರೊಬ್ಬರ ಹೆಸರಿನಲ್ಲೂ ವಂಚಿಸಿದ್ದಾಳೆ. ಹಾಲಿ ಶಾಸಕರು, ಸಚಿವರ ಪರಿಚಯಸ್ಥಳಂತೆ ಪೋಟೋ ತೆಗೆಸಿಕೊಂಡು, ಕೆಲ ಉದ್ಯಮಿಗಳಿಗೆ ತೋರಿಸಿ 100 ಕೋಟಿ ರೂ.ಗೂ ಅಧಿಕ ಹಣ ವಂಚಿಸಿದ್ದಾಳೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಈಕೆ ‘ಶಾದಿ.ಕಾಂ’ ಮೂಲಕವೂ ಹೆಸರು ಬದಲಿಸಿಕೊಂಡು ಕೆಲ ಯುವಕರಿಂದ ತುರ್ತು ಸಂದರ್ಭದ ನೆಪವೊಡ್ಡಿ ಹಣ ಪಡೆದು ವಂಚಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net