ತೆಲಂಗಾಣ, ಆಂಧ್ರದಲ್ಲಿ ಕಂಪಿಸಿದ ಭೂಮಿ: ಹೆದರಿ ಮನೆ, ಅಪಾರ್ಟ್‌ಮೆಂಟ್‌ಗಳಿಂದ ಓಡಿ ಬಂದ ಜನರು! Earthquake

Earthquake
Published on

Earthquake : ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಇಂದು (ಡಿ.04) ಬೆಳ್ಳಂ ಬೆಳಗ್ಗೆ  ಭೂಮಿ ಕಂಪಿಸಿದೆ. ಹಲವೆಡೆ ಲಘು ಭೂಕಂಪ ಸಂಭವಿಸಿದ್ದು, ಇದರಿಂದ ಭಯಭೀತರಾದ ಜನರು ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಹೊರಗೆ ಓಡಿ ಬಂದಿರುವುದಾಗಿ ವರದಿಯಾಗಿದೆ.

ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ರಿಕ್ಟರ್​ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಮುಳುಗು ಜಿಲ್ಲೆಯ ಮೇಡರಮ್​ ಏರಿಯಾವನ್ನು ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 7.27ರ ಸುಮಾರಿಗೆ 40 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.

ಹೈದರಾಬಾದ್ ಸೇರಿದಂತೆ ಮುಳುಗು ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಮಧ್ಯಮ ತೀವ್ರತೆಯ ಭೂಕಂಪನ ಅಪ್ಪಳಿಸಿದ್ದರಿಂದ ಜನರು ಕಂಪನವನ್ನು ಅನುಭವಿಸಿದರು. ಭೂಕಂಪ ಸಂಭವಿಸಿದ ಕ್ಷಣದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಂಡಿದ್ದಾರೆ.

ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಪ್ರಬಲವಾದ ಭೂಕಂಪವೊಂದು ಸಂಭವಿಸಿದೆ. ಮುಳುಗು ಜಿಲ್ಲೆಯು 5.3 ತೀವ್ರತೆಯ ಭೂಕಂಪನದ ಕೇಂದ್ರಬಿಂದುವಾಗಿದೆ. ಹೈದರಾಬಾದ್ ಸೇರಿದಂತೆ ಇಡೀ ತೆಲಂಗಾಣ ಕೂಡ ಕಂಪನವನ್ನು ಅನುಭವಿಸಿದೆ ಎಂದು ತೆಲಂಗಾಣ ವೆದರ್‌ಮ್ಯಾನ್ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇನ್ನು ಭೂಕಂಪನ ಪರಿಣಾಮ ಆಂಧ್ರ ಪ್ರದೇಶದ ಮೇಲೂ ಬೀರಿದೆ. ವಿಜಯವಾಡದಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಜಗ್ಗಯ್ಯಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಭೂಮಿ ಕಂಪಿಸಿದ ಅನುಭವಾಗಿದೆ. ಎನ್‌ಟಿಆರ್ ಜಿಲ್ಲೆಯ ನಂದಿಗಮ ಮತ್ತು ತಿರುವೂರು ಕ್ಷೇತ್ರಗಳ ಗಂಪಲಗುಡೆಂ ವಿಸ್ಸನ್ನಪೇಟೆ ಮಂಡಲಗಳಲ್ಲಿಯೂ ಭೂಕಂಪ ಸಂಭವಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net