ಸ್ಥಳೀಯರಲ್ಲೇ ಹೆಚ್ಚಾಗುತ್ತಿರುವ ಕರೊನಾ ಸೋಂಕು; ರಾಜ್ಯದಲ್ಲಿ 453 ಹೊಸ ಕೇಸ್​ ಪತ್ತೆ

corona virus2
Published on

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 453 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 9,150ಕ್ಕೆ ತಲುಪಿದೆ. 225 ಜನ ಸೋಂಕುಮುಕ್ತರಾಗಿ ಬಿಡುಗಡೆಯಾದರೆ, ಐವರು ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಸೋಂಕಿತರ ಪಟ್ಟಿಯಲ್ಲಿ ಸಾವಿರ ಗಡಿ ದಾಟಿದ ಮೂರು ಜಿಲ್ಲೆಗಳಿದ್ದು, 15 ದಿನಗಳ ನಂತರ ಬೆಂಗಳೂರಿನಲ್ಲಿ ಒಂದೇ ದಿನ 196 ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಪುನಃ ಮೊದಲನೇ ಸ್ಥಾನಕ್ಕೆ ಬಂದಿದೆ. ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು 18, ಗದಗ 18, ಧಾವರಾಡ 15, ಬಾಗಲಕೋಟೆ 14, ಬೀದರ್ 13, ದಾವಣಗೆರೆ, ಉತ್ತರ ಕನ್ನಡ, ಕೋಲಾರ ತಲಾ 8, ದಕ್ಷಿಣ ಕನ್ನಡ 7, ಮಂಡ್ಯ, ಹಾಸನ ತಲಾ 5, ತುಮಕೂರು 4, ಯಾದಗಿರಿ, ಚಿಕ್ಕಬಳ್ಳಾಪುರ, ಹಾವೇರಿ ತಲಾ 3, ರಾಯಚೂರು, ಶಿವಮೊಗ್ಗ, ರಾಮನಗರ ತಲಾ 2 ಹಾಗೂ ಚಿಕ್ಕಮಗಳೂರಿನಲ್ಲಿ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿವೆ.

ಕೇವಲ 74 ಪ್ರಯಾಣಿಕರು: ಭಾನುವಾರ 453 ಸೋಂಕಿತ ಪ್ರಕರಣ ಗಳಲ್ಲಿ ಹೊರ ರಾಜ್ಯದ 69 ವಿದೇಶದ 5 ಜನ ಸೇರಿ ಕೇವಲ 74 ಪ್ರಯಾಣಿಕರಿದ್ದಾರೆ. ಉಳಿದ 379 ಜನರು ಸ್ಥಳೀಯವಾಗಿ ಸೋಂಕಿತರ ಸಂಪರ್ಕ, ಅನಾರೋಗ್ಯ ಕಾರಣದಿಂದ ಸೋಂಕಿಗೆ ತುತ್ತಾಗಿದ್ದಾರೆ.

ಸೋಂಕುಮುಕ್ತರಾದ 225 ಮಂದಿ: ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು, ಗುಣಮುಖರ ಪ್ರಮಾಣ ಕುಸಿತವಾಗಿದೆ. ಜೂ.21 ರಂದು ಬೀದರ್ 58, ರಾಯಚೂರು 34, ದಕ್ಷಿಣ ಕನ್ನಡ 26, ಬೆಂಗಳೂರು ನಗರ 17, ಯಾದಗಿರಿ 15, ಬಳ್ಳಾರಿ 12, ಧಾರವಾಡ 12, ಕಲಬುರಗಿ 9, ವಿಜಯಪುರ, ಹಾಸನ ತಲಾ 7, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ ತಲಾ 6, ಚಿತ್ರದುರ್ಗ, ಗದಗ, ಬೆಳಗಾವಿಯಲ್ಲಿ ತಲಾ 2 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಒಬ್ಬರು ಸೋಂಕುಮುಕ್ತರಾಗಿದ್ದಾರೆ. ಗುಣಮುಖರ ಪ್ರಮಾಣ ಶೇ.61.39ಕ್ಕೆ ಇಳಿಕೆಯಾಗಿದೆ.

ಸೋಂಕಿಗೆ ಐವರು ಬಲಿ: ಬೆಂಗಳೂರಿನ ಕೆಮ್ಮು, ನೆಗಡಿ ಹಾಗೂ ಶೀತಜ್ವರದಿಂದ ಬಳಲುತ್ತಿದ್ದ 53 ವರ್ಷದ ಮಹಿಳೆ, ತೀವ್ರ ಜ್ವರ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿದ್ದ 62 ವರ್ಷದ ವ್ಯಕ್ತಿ ಹಾಗೂ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ಸೇರಿ 3 ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಬೀದರ್​ನ ಕಂಟೇನ್ಮೆಂಟ್ ಪ್ರದೇಶದ ನಿವಾಸಿ 70 ವರ್ಷದ ವೃದ್ಧ ಹಾಗೂ ಅಧಿಕ ರಕ್ತದೊತ್ತಡ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದ 46 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈವರೆಗೆ ಸೋಂಕಿನಿಂದ 137 ಹಾಗೂ ಸೋಂಕಿಗೆ ಒಳಗಾಗಿ ಅನ್ಯ ಕಾರಣದಿಂದ 4 ಮಂದಿ ಸೇರಿ, ಒಟ್ಟು 141 ಜನರು ಮೃತಪಟ್ಟಿದ್ದಾರೆ.

34 ಸಾವಿರ ಸಂರ್ಪತರ ಕ್ವಾರಂಟೈನ್: ರಾಜ್ಯದ 30 ಜಿಲ್ಲೆಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದ ಹೊಂದಿದ 20,301 ಹಾಗೂ ದ್ವಿತೀಯ ಸಂಪರ್ಕದ 14,467 ಮಂದಿ ಸೇರಿ 34,768 ಜನರನ್ನು ಹೋಟೆಲ್, ಹಾಸ್ಟೆಲ್, ಶಾಲೆ ಹಾಗೂ ಇತರೆಡೆ ಕ್ವಾರಂಟೈನ್ ಮಾಡಲಾಗಿದೆ. ಭಾನುವಾರ 12,872 ಜನರ ಕರೊನಾ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ 11,988 ನೆಗೆಟಿವ್ ಬಂದಿದೆ. ರಾಜ್ಯದ 675 ಜ್ವರ ತಪಾಸಣಾ ಕೇಂದ್ರಗಳಲ್ಲಿ 25,470 ಜನರನ್ನು ತಪಾಸಣೆ ಮಾಡಲಾಗಿದೆ.

ಗರ್ಭಿಣಿಗೆ ಸೋಂಕು, ಸಚಿವರಿಗೆ ಭೀತಿ: ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ಗರ್ಭಿಣಿಗೆ ಭಾನುವಾರ ಸೋಂಕು ದೃಢಪಟ್ಟಿದ್ದು, ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿಗೆ ಆತಂಕ ಎದುರಾಗಿದೆ. ಜತೆಗೆ ಈ ವೈದ್ಯರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸಾ ಕೇಂದ್ರ ಹಾಗೂ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಒಂದು ವೇಳೆ ವೈದ್ಯಾಧಿಕಾರಿಗೆ ಸೋಂಕು ತಗುಲಿದ್ದರೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವರು, ಜಿಲ್ಲಾಧಿಕಾರಿ, ಡಿಎಚ್​ಒ ಸೇರಿ ಅನೇಕ ಅಧಿಕಾರಿಗಳು ಕ್ವಾರಂಟೈನ್ ಆಗುವ ಭೀತಿ ಆವರಿಸಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಸೋಂಕು: ಹಾವೇರಿ: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಾಗಿರುವ ವಿದ್ಯಾರ್ಥಿನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಗ್ಗಾಂವಿ ಪಟ್ಟಣದಲ್ಲಿ ಸೋಂಕು ದೃಢಪಟ್ಟ 12 ಜನರಲ್ಲಿ ವಿದ್ಯಾರ್ಥಿನಿಯೂ ಸೇರಿದ್ದಾಳೆ. ಕಂಟೇನ್ಮೆಂಟ್ ಪ್ರದೇಶದಲ್ಲಿ ವಾಸವಾಗಿದ್ದು, ಪರೀಕ್ಷೆಗೆ ಐದು ದಿನ ಮೊದಲು ಸೋಂಕು ಪತ್ತೆಯಾಗಿದೆ. ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪಾಸಿಟಿವ್ ಬಂದಿರುವ ಬಾಲಕಿಗೆ ಆಸ್ಪತ್ರೆಯನ್ನೇ ಪರೀಕ್ಷಾ ಕೇಂದ್ರವನ್ನಾಗಿ ಮಾಡಿ ಪರೀಕ್ಷೆ ಬರೆಸಲು ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಅನುಮತಿ, ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದೇವೆ. | ಎಂ. ಯೋಗೇಶ್ವರ ಅಪರ ಜಿಲ್ಲಾಧಿಕಾರಿ

ವಿಧಾನಸೌಧದ ಮೇಲೆ ಕರೊನಾ ಕರಿನೆರಳು: ಬೆಂಗಳೂರು: ರಾಜಕೀಯ ಅಧಿಕಾರದ ‘ಶಕ್ತಿ ಕೇಂದ್ರ’ ವಿಧಾನ ಸೌಧದ ಮೇಲೂ ಮಾರಕ ಕರೊನಾ ಕರಿನೆರಳು ಆವರಿಸಿದ್ದು, ದೈನಂದಿನ ಕರ್ತವ್ಯಕ್ಕೆ ಹಾಜರಾಗಬೇಕಾದ ಸಿಬ್ಬಂದಿ ವರ್ಗವು ಅವ್ಯಕ್ತ ತಳಮಳದಿಂದ ಚಡಪಡಿಸಲಾರಂಭಿಸಿದೆ. ವಿಕಾಸ ಸೌಧ, ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಬಳಿಕ ವಿಧಾನ ಸೌಧಕ್ಕೂ ಸರದಿಯಂತೆ ಕರೊನಾ ಸೋಂಕು ಕಾಲಿಟ್ಟಿರುವುದು ನೌಕರರ ದಿಗಿಲಿಗೆ ಮುಖ್ಯ ಕಾರಣ. ವಿಧಾನ ಸೌಧದ 3ನೇ ಮಹಡಿಯಲ್ಲಿರುವ ಕಚೇರಿಯ ಹಿರಿಯ ಅಧಿಕಾರಿಯೊಬ್ಬರಿಗೆ ಕರೊನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ತಕ್ಷಣದಿಂದಲೇ ಎಲ್ಲ ಕೊಠಡಿಗಳು, ಮೊಗಸಾಲೆ ಸೇರಿದಂತೆ ಇಡೀ ಕಟ್ಟಡ ಸ್ವಚ್ಛಗೊಳಿಸುವ ಶುರು ಮಾಡಿದ್ದು, ಭಾನುವಾರವೂ ಮುಂದುವರಿಸಿ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಸಿಬ್ಬಂದಿಯಲ್ಲಿ ಮನೆ ಮಾಡಿದ ಕರೊನಾತಂಕ ದೂರವಾಗಿಲ್ಲ. ದೈನಂದಿನ ಕೆಲಸ, ಕಾರ್ಯಗಳ ನಿರ್ವಹಣೆ ಜತೆಗೆ ಸಿಬ್ಬಂದಿ ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕಠಿಣ ನಿಲುವು ತಳೆಯಬೇಕೆಂಬ ಒತ್ತಡ ಹೇರಿದ್ದಾರೆ.

ಜಿಂದಾಲ್​ನಲ್ಲಿ 252 ಸೋಂಕಿತರು: ಬಳ್ಳಾರಿ: ಜಿಲ್ಲೆಯಲ್ಲಿ ಹೊಸದಾಗಿ 26 ಕರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಶನಿವಾರ ತಡರಾತ್ರಿ 19 ಹಾಗೂ ಭಾನುವಾರ 7 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 12 ಮಂದಿ ಜಿಂದಾಲ್ ಉದ್ಯೋಗಿಗಳು. ಈ ಮೂಲಕ ಒಟ್ಟು 252 ಜಿಂದಾಲ್ ನೌಕರರಿಗೆ ಕರೊನಾ ಸೋಂಕು ತಗುಲಿದಂತಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 442 ಏರಿಕೆಯಾಗಿದ್ದು, 112 ಚೇತರಿಕೆಯಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದರೆ, 328 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿಗೆ ಕಣ್ಗಾವಲು ತಂಡ: ಬೆಂಗಳೂರಲ್ಲಿ ಕರೊನಾ ಸಮುದಾಯಕ್ಕೆ ವ್ಯಾಪಿ ಸುತ್ತಿರುವ ಸುಳಿವರಿತ ಸರ್ಕಾರ, ಸಾಂಕ್ರಾಮಿಕ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಹೆಚ್ಚಿಸಲು ಹೊಸ ಕಾರ್ಯತಂಡ ಗಳನ್ನು ರಚಿಸಿದೆ. ಸಾಮಾಜಿಕ ಅಂತರ ಕಾಪಾಡುವುದನ್ನು ಮೇಲ್ವಿಚಾರಣೆ ಮಾಡುವುದು, ಸರ್ವೆಕ್ಷಣೆ ನಡೆಸುವುದು, ರೋಗಿಗಳ ವರ್ಗಾವಣೆ ಹೊಣೆಗಾರಿಕೆಯನ್ನು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net