ರಾಮ ಮಂದಿರಕ್ಕೆ 45 ಕೆಜಿ ಚಿನ್ನ ಬಳಕೆ

untitled-design-6-6843323c0e321
Published on

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ವಣವಾಗಿರುವ ಭವ್ಯ ರಾಮ ಮಂದಿರದಲ್ಲಿ ಈವರೆಗೆ 45 ಕೆ.ಜಿ. ಶುದ್ಧ ಚಿನ್ನವನ್ನು ಬಳಸಲಾಗಿದೆ ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.

ದೇವಾಲಯದ ಸಂಕೀರ್ಣದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಪ್ರತಿಷ್ಠಾಪನೆ ಬಳಿಕ ಮಾತನಾಡಿದ ನೃಪೇಂದ್ರ ಮಿಶ್ರಾ, ತೆರಿಗೆಗಳನ್ನು ಹೊರತುಪಡಿಸಿ ದೇವಾಲಯದಲ್ಲಿ ಬಳಸಲಾಗಿರುವ ಚಿನ್ನದ ಅಂದಾಜು ಮೌಲ್ಯ ಸುಮಾರು 50 ಕೋಟಿ ರೂ. ಎಂದು ಹೇಳಿದ್ದಾರೆ. ದೇವಾಲಯದ ನೆಲಮಹಡಿಯಲ್ಲಿ ಮತ್ತು ಭಗವಾನ್ ರಾಮ ಸಿಂಹಾಸನದ ಬಾಗಿಲುಗಳಲ್ಲಿ ಚಿನ್ನವನ್ನು ವ್ಯಾಪಕವಾಗಿ ಬಳಸಲಾಗಿದೆ. ಶೇಷಾವತಾರ ದೇವಾಲಯದಲ್ಲಿ ಚಿನ್ನದ ಕೆಲಸ ಇನ್ನೂ ನಡೆಯುತ್ತಿದ್ದು, ರಾಮ ಮಂದಿರದ ಮುಖ್ಯ ರಚನೆ ಪೂರ್ಣಗೊಂಡಿದ್ದರೂ ಸಹ ವಸ್ತು ಸಂಗ್ರಹಾಲಯ, ಸಭಾಂಗಣ ಮತ್ತು ಅತಿಥಿ ಗೃಹ ಸೇರಿದಂತೆ ದೇವಾಲಯದ ಸಂಕೀರ್ಣದ ಇತರ ಭಾಗಗಳ ಕೆಲ ಕಾರ್ಯಗಳು ನಿರ್ಮಾಣ ಹಂತದಲ್ಲಿವೆ. ಡಿಸೆಂಬರ್ 2025 ರೊಳಗೆ ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ.

ರಾಮ ದರ್ಬಾರ್​ಗೆ ಸೀಮಿತ ಭಕ್ತರ ಭೇಟಿ: ರಾಮ ದರ್ಬಾರ್ ಪ್ರಾಣಪ್ರತಿಷ್ಠಾಪನೆ ನಂತರ, ಸಾರ್ವಜನಿಕ ಪ್ರವೇಶಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಮಿಶ್ರಾ ಹೇಳಿದ್ದು, ಸದ್ಯಕ್ಕೆ, ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ರಾಮ ದರ್ಬಾರ್​ಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net