

ವಾಷಿಂಗ್ಟನ್: ಮಾಡೆಲ್ ಎಂದರೆ ತೆಳ್ಳಗೆ ಬೆಳ್ಳಗಿರಬೇಕು... ನೋಡಿದಾಕ್ಷಣ ವಾಹ್ ಎನಿಸುವಂತಿರಬೇಕು ಎನ್ನುವುದು ಅನೇಕರ ಕಲ್ಪನೆ. ಆದರೆ ಸೌಂದರ್ಯ ಅದನ್ನೆಲ್ಲ ಮೀರಿದ್ದು ಎಂದು ತೋರಿಸಿಕೊಟ್ಟಿದ್ದಾರೆ ಅಮೆರಿಕದ ಈ ಮಾಡೆಲ್.
ಅಮೆರಿಕದ ಮಹೋಗಾನಿ ಗೇಟರ್ lymphedema ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಬಂದವರಿಗೆ ದೇಹದ ಯಾವುದಾದರೂ ಭಾಗದಲ್ಲಿ ದ್ರವ್ಯಾಂಶ ತುಂಬಿಕೊಂಡು ಊದಿಕೊಳ್ಳುತ್ತದೆ. ಅದೇ ರೀತಿ ಮಹೋಗಾನಿಯ ಬಲಗಾಲು ಊದಿಕೊಂಡಿದೆ. ಬಾಲ್ಯದಿಂದಲೂ ಈ ತೊಂದರೆಯಿದ್ದು, 23 ವರ್ಷದ ಆಕೆಯ ಬಲಗಾಲು ಇದೀಗ ಬರೋಬ್ಬರಿ 45 ಕೆಜಿ ತೂಕವಿದೆ.
ಮೊದ ಮೊದಲು ಈ ಕಾಲು ಮಹೋಗಾನಿಗೆ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತಂತೆ. ಯಾಕೆ ನನಗೇ ಈ ಕಷ್ಟವೆಂದು ದೇವರಿಗೆ ಸಾಕಷ್ಟು ಬಾರಿ ಬೈದಿದ್ದಳಂತೆ. ಆದರೆ ಬರುಬರುತ್ತಾ ಆಕೆಗೆ ಅದು ಸಮಸ್ಯೆ ಎನಿಸಿಕೊಳ್ಳುವುದಕ್ಕಿಂತ ಶಕ್ತಿ ಎನಿಸತೊಡಗಿದೆ. ನನಗೆ ಇದನ್ನು ಎದುರಿಸುವ ಶಕ್ತಿ ಇರುವುದಕ್ಕೆ ದೇವರು ಈ ಸಮಸ್ಯೆಯನ್ನು ನನಗೆ ಕೊಟ್ಟಿದ್ದಾನೆ ಎಂದೆನೆಸಿದೆ. ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕಿದ ಆಕೆ ಸಾವಿರಾರು ಜನರಿಗೆ ಸ್ಫೂರ್ತಿಯಾಗಿ ಹೊರಹೊಮ್ಮಿದ್ದಾಳೆ.
ಅಂದ ಹಾಗೆ ಆಕೆಗೆ ಸಮಾಜ ತೀರಾ ಒಳ್ಳೆಯದಾಗಿ ನೋಡಿಕೊಂಡಿದೆ ಎಂದೂ ಹೇಳಲಾಗದು. ನಿಮ್ಮ ಕಾಲನ್ನು ಕತ್ತರಿಸಿಬಿಡಿ ಎನ್ನುವುದರಿಂದ ಹಿಡಿದು ಅಸಹ್ಯವೆನಿಸುವ ಕಾಮೆಂಟ್ಗಳನ್ನೂ ಮಾಡಿದ್ದರಂತೆ. ಆದರೆ ಅದಕ್ಕಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಕೆ ಒಳ್ಳೆಯದನ್ನೇ ಸ್ವೀಕರಿಸಿಕೊಂಡು ಉತ್ತಮ ಹೆಜ್ಜೆಗಳನ್ನೇ ಇಟ್ಟುಕೊಂಡು ಸಾಗಿದ್ದಾಳೆ. (ಏಜೆನ್ಸೀಸ್)