ಭೀಕ್ಷಾಟನೆ ಮಾಡುತ್ತಿದ್ದ 45 ಮಕ್ಕಳು, 40 ಮಂದಿ ಪಾಲಕರ ವಶ

CCB
Published on

ಬೆಂಗಳೂರು: ನಗರದ ಸಿಗ್ನಲ್‌ಗಳು ಮತ್ತು ರಂಜಾನ್‌ಪ್ರಯುಕ್ತ ಮಸೀದಿ ಮುಂಭಾಗದಲ್ಲಿ ಮಕ್ಕಳನ್ನು ಬಳಸಿಕೊಂಡು ಭೀಕ್ಷಾಟನೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ೪೫ ಮಕ್ಕಳು ಮತ್ತು ೪೦ ಮಂದಿ ಪಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಪುಲಕೇಶಿನಗರದ ಮಸೀದಿ ಮುಂಭಾಗದಲ್ಲಿ ಮಕ್ಕಳನ್ನು ಬಳಸಿಕೊಂಡು ಭೀಕ್ಷಾಟನೆ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಹಾಗೆಯೇ ಸಮೀಪದ ಸಿಗ್ನಲ್‌ಗಳಲ್ಲಿ ಭೀಕ್ಷಾಟನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ೪೫ ಮಕ್ಕಳು ಮತ್ತು ಮತ್ತು ೪೦ ಮಂದಿ ಪಾಲಕರನ್ನು ವಶಕ್ಕೆ ಪಡೆದು, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

ವಶಕ್ಕೆ ಪಡೆದ ಪಾಲಕರ ವಿಳಾಸ, ಹೆಸರು ಪಡೆಯಲಾಗಿದ್ದು, ಕೆಲವರು ರಾಜಸ್ಥಾನ, ಉತ್ತರ ಪ್ರದೇಶ ಭಾಗದಿಂದ ಬಂದಿದ್ದಾರೆ. ಇನ್ನು ಕೆಲವರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಿಂದ ಬಂದು ಭೀಕ್ಷಾಟನೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪಾಲಕರ ಮೂಲ ಪತ್ತೆಗೆ ಯತ್ನ:
ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳ ಸುಪರ್ದಿಯಲ್ಲಿರುವ ಮಕ್ಕಳ ನಿಜವಾದ ಪಾಲಕರು ಯಾರು ಎಂಬುದು ಖಚಿತ ಪಡಿಸಿಕೊಳ್ಳಬೇಕಿದೆ. ಕೆಲ ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮೂಲಕ ನಗರಕ್ಕೆ ಕರೆ ತರಲಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸಬೇಕಿದೆ. ಜತೆಗೆ ದಾಳಿ ಸಂದರ್ಭದಲ್ಲಿ ಎಲ್ಲರೂ ಬುರ್ಖಾ ಧರಿಸಿದ್ದರು. ಈ ಪೈಕಿ ಕೆಲವರು ಹಿಂದೂಗಳು ಇದ್ದರು ಎಂದು ಹೇಳಲಾಗಿದೆ. ಹೀಗಾಗಿ ವಶಕ್ಕೆ ಪಡೆದುಕೊಂಡ ಪಾಲಕರ ಮೂಲ ಹತ್ತೆ ಹಚ್ಚಬೇಕಿದೆ. ಈ ಬಗ್ಗೆ ವಿಚಾರಣೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ನೀಡುವ ವರದಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net