

ಸೌತ್ ಕೆರೊಲಿನಾ: 43 ರೀಸಸ್ ಮಕಾಕ್ ಪ್ರಭೇದದ ಮಂಗಗಳನ್ನು ದಕ್ಷಿಣ ಕೆರೊಲಿನಾದ ಸಂಶೋಧನಾ ಸೌಲಭ್ಯ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಅಷ್ಟು ಕೋತಿಗಳು ಕೂಡ ಅಲ್ಲಿಂದ ಕಳ್ಳರಂತೆ ತಪ್ಪಿಸಿಕೊಂಡಿದ್ದು, ಸಿಬ್ಬಂದಿಗಳ ಕಣ್ಣಿಗೆ ಮಣ್ಣೆರಚಿ ಹೋಗಿರುವುದು ಇದೀಗ ಅಧಿಕಾರಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಭರವಸೆ ನೀಡಿದ್ದು, "ಯಾರೂ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅಪಾಯವೂ ಇಲ್ಲ" ಎಂದು ಹೇಳಿದ್ದಾರೆ.
“ಕೋತಿಗಳು ಯಾವುದೇ ಕಾಯಿಲೆಯಿಂದ ಸೋಂಕಿಗೆ ಒಳಗಾಗಿಲ್ಲ. ಅವು ನಿರುಪದ್ರವಿಗಳು ಮತ್ತು ಮೌನಿ ಜೀವಿಗಳು” ಎಂದು ಯೆಮಾಸ್ಸಿ ಪೊಲೀಸ್ ಮುಖ್ಯಸ್ಥ ಗ್ರೆಗೊರಿ ಅಲೆಕ್ಸಾಂಡರ್ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಫಾ ಜೆನೆಸಿಸ್ ಕಟ್ಟಡದಲ್ಲಿ ಹೊಸ ಉದ್ಯೋಗಿಯೊಬ್ಬರು, ಆವರಣವನ್ನು ಸರಿಯಾಗಿ ಭದ್ರಪಡಿಸುವಲ್ಲಿ ವಿಫಲವಾದ ಹಿನ್ನಲೆ ಕೋತಿಗಳು ಸುಲಭವಾಗಿ ಹೊರಹೋಗಲು ಸಾಧ್ಯವಾಗಿದೆ.
"ತಪ್ಪಿಸಿಕೊಂಡು ಹೋಗಿರುವ ಎಲ್ಲಾ ಕೋತಿಗಳು ಹೆಣ್ಣು. ಪ್ರತಿಯೊಂದೂ ಸುಮಾರು 7 ಪೌಂಡ್ (3 ಕೆಜಿ) ತೂಗುತ್ತದೆ. ವೈದ್ಯಕೀಯ ಪರೀಕ್ಷೆಗೆ ಬಳಸಲಾಗದಷ್ಟು ಚಿಕ್ಕದಾಗಿದೆ. ಪ್ರಸ್ತುತ ಆಲ್ಫಾ ಜೆನೆಸಿಸ್ ಉದ್ಯೋಗಿಗಳು, ಮಂಗಗಳ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ಅವುಗಳನ್ನು ಆಹಾರದೊಂದಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ" ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅಸಲಿಗೆ ಈ ಘಟನೆ ಇಂಗ್ಲಿಷ್ ಭಾಷೆಯಲ್ಲಿ ತೆರೆಕಂಡಿದ್ದ 'ದಿ ಪ್ಲಾನೆಟ್ ಆಫ್ ಏಪ್ಸ್' ಚಿತ್ರವನ್ನು ಈ ಸಂದರ್ಭದಲ್ಲಿ ನೆನಪಿಸಿದೆ,(ಏಜೆನ್ಸೀಸ್).