

ದಾವಣಗೆರೆ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ದುರುಪಯೋಗ, ನಕಲಿ ಜಾಬ್ ಕಾರ್ಡ್ ಸೃಷ್ಟಿ ಸೇರಿದಂತೆ ನಿಯಮಾವಳಿ ಉಲ್ಲಂಘಿಸಿದ ಜಗಳೂರು ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಬರೋಬ್ಬರಿ 43 ನೌಕರರ ವಿರುದ್ಧ ದಾವಣಗೆರೆ ಜಿಲ್ಲಾ ಪಂಚಾಯಿತಿ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.
ಪಿಡಿಒ, ಡಿಇಒ, ತಾಂತ್ರಿಕ ಸಹಾಯಕರು ಸೇರಿದಂತೆ 18 ಜನರನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಲಾಗಿದ್ದರೆ, 9 ಪಿಡಿಒಗಳನ್ನು ಅಮಾನತು ಪಡಿಸಲಾಗಿದೆ. 16 ನೌಕರರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರಕ್ಕೆ ನಷ್ಟ ಮಾಡಿದ ಹಿನ್ನೆಲೆಯಲ್ಲಿ 19 ನೌಕರರಿಗೆ 5.66ಲಕ್ಷ ರೂ.ದಂಡ ವಿಧಿಸಿದ್ದು ವಾರದೊಳಗೆ ಪಾವತಿಸಲು ಸೂಚಿಸಲಾಗಿದೆ. ವಜಾ ಆದವರ ಪೈಕಿ ನಾಲ್ವರು ಇಂಜಿನಿಯರ್, ಏಳು ಜನ ಡೇಟಾ ಆಪರೇಟರ್ಸ್ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದರು.
ಮೈಸೂರು , ಬೀದರ್, ಶಿವಮೊಗ್ಗ, ರಾಮನಗರ ಜಿಪಂ ಉಪ ಕಾರ್ಯದರ್ಶಿಗಳ ನೇತೃತ್ವದ ರಾಜ್ಯಮಟ್ಟದ ತನಿಖಾ ತಂಡದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಗುರುವಾರ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ. 2017-18 , 2018-19ನೇ ಸಾಲಿನ ಕಾಮಗಾರಿಗಳ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು ತನಿಖೆಗೆ ಆದೇಶಿಸಿದ್ದರು.
ತನಿಖಾ ತಂಡ ಗುರುತಿಸಿದ ಲೋಪ
ವಿವಿಧ ಪಂಚಾಯಿತಿಗಳಲ್ಲಿ ನಕಲಿ ಜಾಬ್ ಕಾರ್ಡ್ಗಳ ಸೃಷ್ಟಿ
ಕೂಲಿಕಾರರು-ಯಂತ್ರ ಬಳಕೆಯಲ್ಲಿ ಶೇ. 60: 40ರ ಅನುಪಾತ ನಿರ್ವಹಿಸದಿರುವುದು
ಕೆರೆ ಹೂಳೆತ್ತುವಾಗ ಷರತ್ತು ಮೀರಿ ಒಂದೇ ಕೆರೆಯನ್ನು ವಿವಿಧ ಭಾಗವಾಗಿ ವಿಂಗಡಣೆ
ಪಲ್ಲಾಗಟ್ಟೆಯಲ್ಲಿ ಏಳು ಅನರ್ಹ ಕಟ್ಟಡಗಳಿಗೆ ಕಾಂಪೌಂಡ್ ನಿರ್ಮಾಣ
ಕಬ್ಬಿಣ ಖರೀದಿ ಲೆಕ್ಕವನ್ನು ಅಳತೆ ಪುಸ್ತಕದಲ್ಲಿ ನಮೂದಿಸಿ ವೋಚರ್ನಲ್ಲಿ ಕೈ ಬಿಟ್ಟಿರುವುದು
ಪಲ್ಲಾಗಟ್ಟೆಯಲ್ಲಿ ನಿಯಮಬಾಹಿರವಾಗಿ 321 ಜಾಬ್ ಕಾರ್ಡ್ಗಳ ರದ್ದು
ಬಿಳಿಚೋಡಿನಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿ ಗ್ರಾಪಂನಿಂದ ಅನುಷ್ಠಾನ
ಬಿಳಿಚೋಡು ಪೊಲೀಸ್ ಠಾಣೆ, ಆಸ್ಪತ್ರೆ ಉದ್ಯಾನದ ಒಂದೇ ಕಾಮಗಾರಿ 2 ಭಾಗವಾಗಿ ವಿಂಗಡಣೆ
ಬಿಸ್ತುವಳ್ಳಿಯಲ್ಲಿ 282 ಜನರಿಗೆ ಕೂಲಿ ಪಾವತಿ ಬಳಿಕ ಜಾಬ್ಕಾರ್ಡ್ ರದ್ದುಪಡಿಸಿ ಹಣ ದುರ್ಬಳಕೆ
ಚೆಕ್ ಡ್ಯಾಂ, ಫೀಡರ್ ನಾಲೆ ನಿರ್ವಣಕ್ಕೆ ಅಂದಾಜು ವೆಚ್ಚಕ್ಕಿಂತ ಹೆಚ್ಚು ಮೊತ್ತ ಪಾವತಿ
ಜಿಪಂ ಇತಿಹಾಸದಲ್ಲಿ ಇದೇ ಮೊದಲು
ದಾವಣಗೆರೆ ಜಿಲ್ಲಾ ಪಂಚಾಯಿತಿ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲು. ಈ ಮೂಲಕ ಅಕ್ರಮ ಸಹಿಸುವುದಿಲ್ಲ ಎಂಬ ದೊಡ್ಡ ಸಂದೇಶವೊಂದನ್ನು ನೌಕರ ವರ್ಗಕ್ಕೆ ಜಿಪಂ ರವಾನಿಸಿದೆ. ಅಕ್ರಮಕ್ಕೆ ಪ್ರಚೋದನೆ ನೀಡಿದ ಪ್ರಭಾವಿಗಳು ಬಚಾವಾಗಿದ್ದಾರೆ ಎಂದು ಸಿಇಒ ಹೇಳಿದರೆ, ಪ್ರಭಾವಿಗಳ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಸದಸ್ಯರು ಕೋರಿದರು.