ನಿಮ್ಮನ್ನು ಮುಂದಿನ 10 ವರ್ಷಗಳ ಕಾಲ ಬ್ಯುಸಿಯಾಗಿರಿಸುತ್ತೇವೆ; ಸಂದೇಶ್​​ಖಾಲಿ ಆರೋಪಿ ಪರ ವಕೀಲರಿಗೆ ಕೋರ್ಟ್ ಛೀಮಾರಿ ​

Kolkata HC
Published on

ಕಲ್ಕತ್ತಾ: ಸಂದೇಶ್​​ಖಾಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪ್ರಭಾವಿ ನಾಯಕ ಶಹಜಹಾನ್​ ಶೇಖ್​ನನ್ನು ಪಶ್ಚಿಮ ಬಂಗಾಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ತಲೆಮರೆಸಿಕೊಂಡ 55 ದಿನಗಳ ಬಳಿಕ ಉತ್ತರ 24 ಪರಗಣ ಜಿಲ್ಲೆಯ ಮಿನಖಾನ್​ ಏರಿಯಾದಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ಕೋರ್ಟ್​ ಅದನ್ನು ತಿರಸ್ಕರಿಸಿದೆ. ಆರೋಪಿಗಳ ಪರ ವಕೀಲರ ಕುರಿತು ಕಟುವಾದ ಮಾತುಗಳನ್ನು ಆಡಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನೇತೃತ್ವದ ಪೀಠವು ಶೇಖ್​ ಶಹಜಹಾನ್​ ಬಗ್ಗೆ ಯಾವುದೇ ಸಹಾನೂಭೂತಿ ಹೊಂದಿಲ್ಲ ಎಂದು ತಿಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರಿದ್ದ ಏಕಸದಸ್ಯ ಪೀಠವು ಮಿಸ್ಟರ್ ಕೌನ್ಸಿಲ್ (ವಕೀಲ), ಈ ವ್ಯಕ್ತಿಯ -ಶೇಖ್‌ – ವಿರುದ್ಧ ಸುಮಾರು 43 ಪ್ರಕರಣಗಳಿವೆ. ಗಮನದಲ್ಲಿಟ್ಟುಕೊಳ್ಳಿ, ಈಗ ಮುಂದಿನ 10 ವರ್ಷಗಳವರೆಗೆ, ಈ ವ್ಯಕ್ತಿ ನಿಮ್ಮನ್ನು ಬ್ಯುಸಿಯಾಗಿರಿಸುತ್ತಾರೆ. ಮುಂದಿನ 10 ವರ್ಷಗಳವರೆಗೆ ನೀವು ಅವರ ಎಲ್ಲ ಪ್ರಕರಣಗಳನ್ನು ನಿರ್ವಹಿಸಬೇಕಾಗುತ್ತದೆ.

TMC Leader

ಆ ವ್ಯಕ್ತಿಯ ಬಗ್ಗೆ ನಮಗೆ ಯಾವುದೇ ಸಹಾನುಭೂತಿ ಇಲ್ಲ. ದಯವಿಟ್ಟು ಸೋಮವಾರ ಬನ್ನಿ, ಈಗ ಅಲ್ಲ. ಮುಂದಿನ 10 ದಿನಗಳ ಕಾಲ ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗುತ್ತಿದೆ ಎಂದು ಹೇಳಿದ ನ್ಯಾಯಾಧೀಶರು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಪ್ರಕರಣದ ಹಿನ್ನಲೆ

ಕಳೆದ ತಿಂಗಳು, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡದ ಮೇಲೆ ಗುಂಪು ದಾಳಿಗೆ ನಡೆಸಿದ್ದ ಪ್ರಕರಣದಲ್ಲಿ ಶೇಖ್‌ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಲ್ಲದೆ, ಶೇಖ್‌ ವಿರುದ್ಧ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದ ಆದಿವಾಸಿ, ಬುಡಕಟ್ಟು ಜನರು ಸುಮಾರು 100ಕ್ಕೂ ಹೆಚ್ಚು ದೂರುಗಳನ್ನ ದಾಖಲಿಸಿದ್ದಾರೆ. ಶೇಖ್‌ ಮತ್ತು ಸಹಚರರು ತಮ್ಮ ಭೂಮಿಯನ್ನ ಬಲವಂತವಾಗಿ ಕಸಿದುಕೊಂಡಿದ್ದಾರೆ. ಮನರೇಗಾ ಅಡಿಯಲ್ಲಿ ತಮ್ಮ ದುಡಿಮೆಯ ಹಣವನ್ನೂ ಕಿತ್ತುಕೊಂಡಿದ್ದಾರೆ. ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನ ಎಸಗಿದ್ದಾರೆ ಎಂದು ದೂರುಗಳಲ್ಲಿ ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net