

ಕೊಲಂಬೊ: ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಶ್ರೀಲಂಕಾದಲ್ಲಿ, ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆ ನೀಡಬೇಕೆಂಬ ಆಗ್ರಹಕ್ಕೆ ಈಗ ಆಡಳಿತಾರೂಢ ಮಿತ್ರಪಕ್ಷಗಳೂ ಧ್ವನಿಗೂಡಿಸಿವೆ. ಜತೆಗೆ 41 ಸಂಸದರು, ಈ ಮೈತ್ರಿಕೂಟವನ್ನು ತೊರೆದಿದ್ದಾರೆ. ಹೀಗಾಗಿ ಗೊತಬಯ ನೇತೃತ್ವದ ಮೈತ್ರಿಕೂಟ ಸಂಸತ್ತಿನಲ್ಲಿ ಬಹುಮತ ಕಳೆದು ಕೊಂಡಿದೆ. ಈ ಮಧ್ಯೆ, ಬಿಕ್ಕಟ್ಟನ್ನು ಬಗೆಹರಿಸುವಂತೆ ಆಗ್ರಹಿಸಿ ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಣಕಾಸು ಸಚಿವರಾಗಿ ಸೋಮವಾರವಷ್ಟೇ ಅಧಿಕಾರ ಸ್ವೀಕರಿಸಿದ್ದ ಅಲಿ ಸಬ್ರಿ, ಜನರ ಆಕ್ರೋಶ ಭುಗಿಲೆದ್ದಿದ್ದರಿಂದ ಮಂಗಳವಾರ ಪದತ್ಯಾಗ ಮಾಡಿದ್ದಾರೆ. ಸಬ್ರಿ ಮೂರು ದಿನಗಳಲ್ಲಿ ಎರಡನೇ ಸಲ ರಾಜೀನಾಮೆ ಕೊಟ್ಟಂತಾಗಿದೆ. ‘ತಾತ್ಕಾಲಿಕ ಕ್ರಮವಾಗಿ ನಾನು ವಿತ್ತ ಸಚಿವ ಸ್ಥಾನ ವಹಿಸಿಕೊಂಡಿದ್ದೆ’ ಎಂದು ಅಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಸಬ್ರಿ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಅವರು ನ್ಯಾಯ ಖಾತೆ ಸಚಿವರಾಗಿದ್ದರು. ಮಾರ್ಚ್ 3ರಂದು ಎಲ್ಲ ಸಚಿವರೊಂದಿಗೆ ಅವರೂ ರಾಜೀನಾಮೆ ಕೊಟ್ಟ ನಂತರ ಸೋದರ ಬಾಸಿಲ್ ರಾಜಪಕ್ಸರನ್ನು ಹಣಕಾಸು ಸಚಿವ ಸ್ಥಾನದಿಂದ ವಜಾ ಮಾಡಿ ಸಬ್ರಿಯನ್ನು ಗೋತಬಯ ನೇಮಿಸಿದ್ದರು.
ಪ್ರತಿಪಕ್ಷ ತಿರಸ್ಕಾರ: ಸಂಯುಕ್ತ ಸರ್ಕಾರವನ್ನು ಸೇರಬೇಕೆಂಬ ಗೋತಬಯ ಆಹ್ವಾನವನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ. ಇದೊಂದು ‘ಅವಿವೇಕದ ಕ್ರಮ’ ಎಮದಿರುವ ವಿಪಕ್ಷ ನಾಯಕರು, ರಾಜೀನಾಮೆ ಕೊಡುವಂತೆ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ. ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ತೀವ್ರವಾಗಿದ್ದು ಅಧಿಕಾರದಲ್ಲಿ ಮುಂದುವರಿಯಲು ಅಧ್ಯಕ್ಷರಿಗೆ ನೈತಿಕ ಹಕ್ಕಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ರಾಜೀನಾಮೆ: ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ಮೊದಲ ಬಾರಿಗೆ ಮಂಗಳವಾರ ಸಂಸತ್ತು ಪುನಃ ಅಧಿವೇಶನಕ್ಕಾಗಿ ಸೇರಿದಾಗ ಉಪಸ್ಪೀಕರ್ ರಣಜಿತ್ ಸಿಯಂಬಲಪಿತಿಯಾ ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದರು.
ಮಳೆಯಲ್ಲೇ ವಿದ್ಯಾರ್ಥಿಗಳ ಪ್ರತಿಭಟನೆ: ಧಾರಾಕಾರ ಮಳೆ ಹಾಗೂ ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ನೂರಾರು ವಿದ್ಯಾರ್ಥಿಗಳು ಮಂಗಳವಾರ ಲಂಕಾ ಪ್ರಧಾನಿ ನಿವಾಸದತ್ತ ಮೆರವಣಿಗೆ ನಡೆಸಿದರು. ವಕೀಲರು ಕೂಡ ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ನಡುವೆ ಲಂಕಾ ಸರ್ಕಾರ ಆಸ್ಟ್ರೇಲಿಯಾ, ನಾರ್ವೆ ಮತ್ತು ಇರಾಕ್ನಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಗಳನ್ನು ಮಂಗಳವಾರ ತಾತ್ಕಾಲಿಕವಾಗಿ ಮುಚ್ಚಿದೆ.
ಐಎಂಎಫ್ ನಿಗಾ: ಶ್ರೀಲಂಕಾದ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳನ್ನು ‘ನಿಕಟವಾಗಿ’ ಗಮನಿಸುತ್ತಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಹೇಳಿದೆ. ಲಂಕಾ ಅಧಿಕಾರಿಗಳೊಂದಿಗೆ ಸಮಾಲೋಚನೆ ಯನ್ನು ಎದುರು ನೋಡುತ್ತಿರುವುದಾಗಿ ಐಎಂಎಫ್ ಶ್ರೀಲಂಕಾ ಮಿಷನ್ ಮುಖ್ಯಸ್ಥ ಮಸಾಹಿರೊ ನೊಝಾಕಿ ಹೇಳಿದ್ದಾರೆ.
ಕರೆನ್ಸಿ ಅಪಮೌಲ್ಯದಿಂದ ಬಿಕ್ಕಟ್ಟು: ಶ್ರೀಲಂಕಾ ಸರ್ಕಾರ ಕಳೆದ ತಿಂಗಳು ತನ್ನ ಕರೆನ್ಸಿಯ ಮೌಲ್ಯವನ್ನು ತೀವ್ರವಾಗಿ ಅಪಮೌಲ್ಯಗೊಳಿಸಿದ ನಂತರ ಬೆಲೆಗಳು ಗಗನಕ್ಕೇರಿದ್ದು ಜೀವನಾವಶ್ಯಕ ಸಾಮಗ್ರಿಗಳ ಕೊರತೆ ಅತೀವವಾಗಿದೆ. ಇಂಧನ ಮತ್ತು ಔಷಧಿಗಳ ಅಭಾವವೂ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದ್ವೀಪ ರಾಷ್ಟ್ರದಲ್ಲಿ ಸತತವಾಗಿ ಆಡಳಿತ ನಡೆಸಿದ ಪಕ್ಷಗಳ ಆರ್ಥಿಕ ದುರಾಡಳಿತವೇ ಪ್ರಸಕ್ತ ಬಿಕ್ಕಟ್ಟಿಗೆ ಕಾರಣ. ದೇಶದ ಅತಿ ಪ್ರಮುಖ ಆದಾಯ ಮೂಲವಾದ ಪ್ರವಾಸೋದ್ಯಮವು 2019ರ ಕೊಲಂಬೊ ಸರಣಿ ಬಾಂಬ್ ಸ್ಪೋಟಗಳಿಂದಾಗಿ ತೀವ್ರವಾಗಿ ಉಧ್ವಸ್ತಗೊಂಡಿತ್ತು. ನಂತರ, ಕರೊನಾ ಸಾಂಕ್ರಾಮಿಕತೆ ಅಪ್ಪಳಿಸಿ ಪರಿಸ್ಥಿತಿಯನ್ನು ಬಿಗಡಾಯಿಸಿತ್ತು. ಇದರಿಂದಾಗಿ ದೇಶದ ವಿದೇಶಿ ವಿನಿಮಯ ಸಂಗ್ರಹ (ಫೋರೆಕ್ಸ್ ರಿಸರ್ವ್) ಕಳೆದ ಎರಡು ವರ್ಷಗಳಲ್ಲಿ ಶೇಕಡ 70ರಷ್ಟು ಕುಸಿದಿತ್ತು. ಫೆಬ್ರವರಿಯಲ್ಲಿ ಲಂಕಾದ ಫೋರೆಕ್ಸ್ ರಿಸರ್ವ್ 2.30 ಶತಕೋಟಿ ಡಾಲರ್ ಆಗಿತ್ತು. ಆದರೆ, ವಿದೇಶಿ ಸಾಲವೇ 7 ಶತಕೋಟಿ ಡಾಲರ್ ಆಗಿದ್ದು ಆ ಪೈಕಿ ಬಹುತೇಕ ಸಾಲವನ್ನು ಇದೇ ಜುಲೈನಲ್ಲಿ ಮರುಪಾವತಿ ಮಾಡಬೇಕಿದೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನೆರವಾಗುವಂತೆ ಭಾರತ ಮತ್ತು ಚೀನಾಕ್ಕೆ ಲಂಕಾ ಮೊರೆಯಿಟ್ಟಿದ್ದು ಭಾರತ ಸಹಾಯಹಸ್ತ ಚಾಚಿದೆ.
1.5 ಶತಕೋಟಿ ಡಾಲರ್ ನೆರವು: ಶ್ರೀಲಂಕಾಕ್ಕೆ ಭಾರತ ಸರ್ಕಾರ ಸಾಲದ ರೂಪದಲ್ಲಿ ನೀಡುತ್ತಿರುವ ನೆರವು 1.5 ಶತಕೋಟಿ ಡಾಲರ್ ಮುಟ್ಟಿದೆ. ಮುಂದೆಯೂ ಸರಕು ಸಾಮಗ್ರಿಗಳನ್ನು ಪೂರೈಸಲಾಗುತ್ತದೆ ಎಂದು ಭಾರತೀಯ ಹೈ ಕಮಿಷನರ್ ಮಂಗಳವಾರ ತಿಳಿಸಿದ್ದಾರೆ.