

ಬೆಂಗಳೂರು: 402 ಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಪರಿಷ್ಕೃತ ಆಯ್ಕೆಪಟ್ಟಿ ಪ್ರಕಟಿಸುವಂತೆ ಉದ್ಯೋಗ ಆಕಾಂಕ್ಷಿಗಳು ಗೃಹ ಇಲಾಖೆಗೆ ಒತ್ತಾಯಿಸಿದ್ದಾರೆ.
545 ಮತ್ತು 402 ಪಿಎಸ್‌ಐ ಹುದ್ದೆಗಳಿಗೆ ಪೊಲೀಸ್ ನೇಮಕಾತಿ ವಿಭಾಗ ಏಕಕಾಲಕ್ಕೆ ದೈಹಿಕ ಮಾನದಂಡ ಪರೀಕ್ಷೆ ನಡೆಸಿತ್ತು. ಇದರ ನಡುವೆ 545 ಎಸ್‌ಐ ಹುದ್ದೆಗಳ ಪರೀಕ್ಷೆಯಲ್ಲಿ ವಿವಾದ ಸೃಷ್ಟಿಯಾಗಿ ಕೊನೆಗೆ ಹೈಕೋರ್ಟ್ ಆದೇಶದಂತೆ ಮರು ಪರೀಕ್ಷೆ ನಡೆದು 2024ರ ಅ.21ರಂದು ಲಿತಾಂಶ ಪ್ರಕಟವಾಗಿದೆ. ಪ್ರಸ್ತುತ ಆಯ್ಕೆಗೊಂಡ ಅಭ್ಯರ್ಥಿಗಳು ಮೈಸೂರು, ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಶಿಕ್ಷಾರ್ಥಿಗಳಾಗಿದ್ದಾರೆ.
ಆದರೆ, 402 ಪಿಎಸ್‌ಐ ನೇಮಕಾತಿಗೆ ಪರೀಕ್ಷೆ ನಡೆದು ಕಳೆದ ಡಿ.26ರಂದು ಹೈಕೋರ್ಟ್‌ನಲ್ಲಿರುವ ರಿಟ್ ಪಿಟಿಷನ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಂತೆ ವೃಂದ, ಮೀಸಲಾತಿ ಪ್ರವರ್ಗ ಬದಲಾವಣೆ, ಅರ್ಹತಾ ಪಟ್ಟಿಯಲ್ಲಿನ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗೆ ಒಳಪಟ್ಟಿರುತ್ತದೆ ಎಂದು ಷರತ್ತು ವಿಧಿಸಿ 314 ಅಭ್ಯರ್ಥಿಗಳ ಆಯ್ಕೆಪಟ್ಟಿ ಪ್ರಕಟಿಸಿದೆ.
ಆದರೆ, 545 ಪಿಎಸ್‌ಐ ನೇಮಕಾತಿಯಲ್ಲಿ ಆಯ್ಕೆಗೊಂಡು ತರಬೇತಿ ಪಡೆಯುತ್ತಿರುವವರ ಪೈಕಿ 80ಕ್ಕೂ ಅಧಿಕ ಅಭ್ಯರ್ಥಿಗಳು 402 ಪಿಎಸ್‌ಐ ನೇಮಕಾತಿಯಲ್ಲಿಯೂ ಮರು ಆಯ್ಕೆ ಆಗಿದ್ದಾರೆ. ಸೇವಾ ಹಿರಿತನ ಸಿಗುವ ಕಾರಣಕ್ಕೆ ಈ ಅಭ್ಯರ್ಥಿಗಳು ಮೊದಲ ನೇಮಕಾತಿ 545 ಹುದ್ದೆಯನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆ. 402 ಎಸ್‌ಐ ನೇಮಕಾತಿಗೆ ನಿರಾಕರಿಸುವ ಸಾಧ್ಯತೆ ಇದೆ.
ಮರು ಆಯ್ಕೆಗೊಂಡಿರುವ ಅಭ್ಯರ್ಥಿಗಳ ಕಡೆಯಿಂದ ‘ಇಚ್ಛೆ ಇಲ್ಲ’ (ನಾಟ್ ವಿಲ್ಲಿಂಗ್‌ನೆಸ್) ಲೆಟರ್ ಪಡೆದು 2ನೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ ಮಾಡಬೇಕು. ಇದರಿಂದ ಖಾಕಿ ಧರಿಸಿ ಸೇವೆ ಸಲ್ಲಿಸಲು ಕಳೆದ 5 ವರ್ಷದಿಂದ ಕಾದು ಕುಳಿತಿರುವ ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ. 2016 ಮತ್ತು 2021-22ರಲ್ಲಿ ನಡೆದ ಪಿಎಸ್‌ಐ ನೇಮಕಾತಿ ವೇಳೆ ಪೊಲೀಸ್ ನೇಮಕಾತಿ ವಿಭಾಗದಿಂದಲೇ ಮರು ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಖುದ್ದು ದೂರವಾಣಿ ಕರೆ ಮಾಡಿ ಅವರಿಂದ ‘ಇಚ್ಛೆ ಇಲ್ಲ’ ಪತ್ರ ಪಡೆದು ತಿಂಗಳ ಒಳಗಾಗಿ ಪರಿಷ್ಕೃತ ಪಟ್ಟಿ ಪ್ರಕಟಿಸುತ್ತಿದ್ದರು.
ಆದರೆ, 402 ಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿ ಮೂರು ತಿಂಗಳು ಕಳೆದರೂ ಪರಿಷ್ಕೃತ ಪಟ್ಟಿ ಪ್ರಕಟಿಸಿಲ್ಲ ಮತ್ತು ಮೊದಲ ಪಟ್ಟಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ತರಬೇತಿಗೂ ಕಳುಹಿಸುತ್ತಿಲ್ಲ. ಈ ಕೂಡಲೇ 402 ಎಸ್‌ಐ ನೇಮಕಾತಿಯನ್ನು ಪೂರ್ಣ ಮಾಡಬೇಕೆಂದು ನೊಂದ ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.