

ಬೆಂಗಳೂರು: ರಾಜ್ಯದಲ್ಲಿ ಪಶುವೈದ್ಯ ಇಲಾಖೆ ಎದುರಿಸುತ್ತಿರುವ ವೈದ್ಯರ ಬರ ನೀಗಿಸುವ ನಿಟ್ಟಿನಲ್ಲಿ 400 ಪಶು ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳುವುದಕ್ಕೆ ಗುರುವಾರ ನಡೆದ ಸಂಪುಟ ಸಭೆ ಸಮ್ಮತಿಯ ಮುದ್ರೆಯೊತ್ತಿದೆ. ಸುಮಾರು 900 ಪಶು ವೈದ್ಯ ಹುದ್ದೆಗಳು ಖಾಲಿ ಇದ್ದು, ಪಶು ವೈದ್ಯರ ತೀವ್ರ ಕೊರತೆ ಎದುರಾಗಿರುವುದರಿಂದ ಇಲಾಖಾ ನೇಮಕಾತಿ ಮೂಲಕ ಭರ್ತಿ ಮಾಡಲು ಒಪ್ಪಿಗೆ ನೀಡಿರುವುದಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ
ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾದ್ದರಿಂದ ಕಳೆದ ಹಲವು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದು ಸಮರ್ಪಕವಾಗಿ ರೋಗ ನಿಯಂತ್ರಣ, ಪಶು ಆರೋಗ್ಯ ಸೇವೆ, ಕೃತಕ ಗರ್ಭಧಾರಣೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೇಮಕಕ್ಕೆ ಆದ್ಯತೆ ನೀಡಲಾಗಿದೆ. ಹಲವಾರು ವರ್ಷಗಳಿಂದ ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳು ಸೇರಿದಂತೆ ಸಾವಿರಾರು ಹುದ್ದೆ ಖಾಲಿಯಿದ್ದರೂ ಯಾವ ಸಚಿವರೂ ನೇಮಕಾತಿಗೆ ಆಸಕ್ತಿ ತೋರಿರಲಿಲ್ಲ, ಇಲಾಖೆಯ ಅಧಿಕಾರವಹಿಸಿಕೊಂಡ ದಿನದಿಂದ ಹುದ್ದೆಗಳ ಭರ್ತಿಗೆ ಹೆಚ್ಚಿನ ಒತ್ತು ನೀಡಿ ನಿರಂತರ ಕ್ರಮ ಕೈಗೊಂಡಿದ್ದಾಗಿ ಇದೇ ವೇಳೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟು ಖಾಲಿ ಇರುವ 900ಕ್ಕೂ ಹೆಚ್ಚು ಹುದ್ದೆಗಳ ಪೈಕಿ 400 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು, ತಕ್ಷಣ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗುವುದು. | ಪ್ರಭು ಚವ್ಹಾಣ್ ಪಶುಸಂಗೋಪನೆ ಸಚಿವ
ಕೆಪಿಎಸ್ಸಿ ಅಕ್ರಮ ಪಟ್ಟಿ ಸಕ್ರಮ!: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) 2011ರ ಬ್ಯಾಚ್ ಅಕ್ರಮವನ್ನು ನುಂಗಿಕೊಂಡು ಕಳಂಕಿತ ಆಯ್ಕೆ ಪಟ್ಟಿಯನ್ನೇ ಒಪ್ಪಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕಳೆದ ಸಂಪುಟದಲ್ಲಿ ಅಂತಿಮ ತೀರ್ಮಾನ ಮಾಡಲು ಕಾನೂನು ಸಚಿವರಿಗೆ ಸಿಎಂ ಸೂಚಿಸಿದ್ದರು. ಗುರುವಾರ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಈ ಬಾರಿ ವಿಧಾನಮಂಡಲ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಈ ಹಿಂದೆ ವಿಧಾನಸಭೆಯಲ್ಲಿ ಕೊಟ್ಟಿದ್ದ ಮಾತಿ ನಂತೆ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂಬುದು ನಮ್ಮ ನಿರ್ಧಾರ. ಈ ಬಾರಿ ಅಸೆಂಬ್ಲಿಯಲ್ಲಿ ತೀರ್ವ ನಕ್ಕೆ ಬರಲು ನಿರ್ಧರಿಸಿದ್ದೇವೆ ಎಂದರು.
6000 ಸ್ಮಾರ್ಟ್ ತರಗತಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂಜಿನಿಯರಿಂಗ್, ಪಾಲಿಟೆಕ್ನಿಕ್ನ ತರಗತಿ ಗಳನ್ನು ಹಂತಹಂತವಾಗಿ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸುವ ಸರ್ಕಾರದ ಕಾರ್ಯಕ್ರಮ ವಿಸ್ತರಣೆಗೊಂಡಿದೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 14 ಎಂಜಿನಿಯರಿಂಗ್ ಕಾಲೇಜುಗಳು ಮತ್ತು 87 ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಡಿಜಿಟಲ್
ಕಲಿಕೆ ಭಾಗವಾಗಿ 6000 ಸ್ಮಾರ್ಟ್ ತರಗತಿ ಆರಂಭಿಸಲು 97.50 ಕೋಟಿ ರೂ.ಗೆ ಅಂದಾಜಿನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. 2021ರ ಜೂನ್ 23ರಂದು ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ 2500 ಸ್ಮಾರ್ಟ್ ಕ್ಲಾಸ್ ತರಗತಿ ಘೋಷಿಸಿದ್ದರು. ಬಳಿಕ ಈವರೆಗೆ ಅನುಷ್ಠಾನ ಮಾಡಲಾಗಿದೆ..
ಡ್ರೋನ್ ಸೇವೆಗೆ 287 ಕೋಟಿ ರೂಪಾಯಿ: ರಾಜ್ಯದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ಹಾಗೂ ಕೃಷಿ ಭೂಮಿಯ ಹಕ್ಕು ದಾಖಲೆಗಳನ್ನು ಮತ್ತು ಪಟ್ಟಣ, ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ 287 ಕೋಟಿ ರೂ. ವೆಚ್ಚ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೆಟಿಪಿಪಿ ಕಾಯ್ದೆ ಅನುಸರಿಸಿ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋನ್ ಒಂದು ಸೇವೆ ಅಥವಾ ವೈಮಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ 5 ಡ್ರೋನ್ಗಳನ್ನು ಒದಗಿಸಿತ್ತು. ಈ ಹಣದಲ್ಲಿ ಹೆಚ್ಚುವರಿ ಡ್ರೋನ್ ಬಳಕೆ ಮಾಡಿ ಸಮೀಕ್ಷೆ ನಡೆಸಲಾಗುತ್ತದೆ. ಕುಡಿಯುವ ನೀರಿನ ವಿವಿಧ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಪ್ರಮುಖವಾಗಿ, ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಸ್ತುತ ಚಾಲನೆಯಲ್ಲಿರುವ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಮರಾಜನಗರ ಜಿಲ್ಲೆಯ 32 ಗ್ರಾಮಗಳಿಗೆ ವಿಸ್ತರಿಸುವ 22 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.
ಕುಡಿಯುವ ನೀರು ಯೋಜನೆ: ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ ಬಾಕಿ ಇರುವ 300 ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಅಡಿ ನೀರುಕೊಡಲು 392.08 ಕೋಟಿ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದರೆ ಗುರುಮಿಠಕಲ್ ವ್ಯಾಪ್ತಿಯಲ್ಲಿ ಭೀಮಾನದಿ ಪಾತ್ರದಿಂದ 20 ಕೆರೆಗಳಿಗೆ ನೀರು ತುಂಬಿಸುವ 165 ಕೋಟಿ ರೂ. ಅಂದಾಜು ಮೊತ್ತದ ಯೋಜನೆಯನ್ನು ಪರಿಷ್ಕರಿಸಿ ಅನುಮೋದನೆ ಪಡೆಯಲು ಸೂಚನೆ ನೀಡಲಾಯಿತು. ಚಿಕ್ಕೋಡಿ ತಾಲೂಕಿನ ಕಲ್ಲೋಳ ಯಡೂರು ರಸ್ತೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಮರು ನಿರ್ಮಾಣ ಕಾಮಗಾರಿಯ 35 ಕೋಟಿಯ ರೂ. ವಿವರ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಹೊನ್ನಾಳಿ ತಾಲೂಕಿನ ಪಲವನಹಳ್ಳಿ ಇತರೆ 59 ಜನವಸತಿಗಳಿಗೆ ಕುಡಿಯುವ ನೀರಿನ ಯೋಜನೆಗೆ 830 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ.
ನನಗೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡುವುದಾಗಿ ಹೇಳಿದ್ದರು, ಬೇರೆ ಜಿಲ್ಲೆಗೆ ಹೋಗಲ್ಲ ಬೇಡ ಎಂದೆ. ಬೇರೆ ಜಿಲ್ಲೆಗೆ ಹೋಗಿ ತಳವೂರಿ ಪರಿಶೀಲಿಸಿ ಕೆಲಸ ಮಾಡಿಸುವಷ್ಟು ಸಮಯ ಇನ್ನು ಬಾಕಿ ಇದೆ ಎಂದು ನನಗೆ ಅನಿಸಲ್ಲ. ಇದು ನಮ್ಮ ಪಾಲಿಸಿ ನಿರ್ಧಾರ. ಗುರುವಾರದ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಚಾರವಾಗಿ ಚರ್ಚೆಯಾಗಿಲ್ಲ. ನನಗೆ ನೋವೇಕೆ ಆಗುತ್ತದೆ, ಮಂತ್ರಿಗಿರಿ ಹೋಗಿದೆಯೇ? | ಮಾಧುಸ್ವಾಮಿ ಕಾನೂನು ಸಚಿವ
3 ನಿಗಮ ವಿಲೀನ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮಗಳನ್ನು ಒಂದೇ ನಿಗಮವಾಗಿ ವಿಲೀನಗೊಳಿಸಲು ಸಂಪುಟ ತೀರ್ಮಾನ ಮಾಡಿದೆ. ನಿಗಮಗಳಲ್ಲಿ ಕಾರ್ಯಭಾರ ಕಡಿಮೆ, ಹೊರೆ ಜಾಸ್ತಿ, ಉದ್ದೇಶವೂ ಈಡೇರದ ಹಿನ್ನೆಲೆಯಲ್ಲಿ 3 ನಿಗಮ ಒಂದು ಮಾಡಿ ಚಟುವಟಿಕೆ ನಡೆಸಲು ತೀರ್ವನಿಸಲಾಗಿದೆ.