ನಲವತ್ತರ ನಂತರ ಆರೋಗ್ಯ ಕಾಳಜಿ ಅಗತ್ಯ: ಅರ್ಕೇಶ್ವರ ಸೇವಾ ಸಂಘದ ಅಧ್ಯಕ್ಷ ಸಿ.ಎನ್. ವೆಂಕಟೇಶ್ ಕಿವಿಮಾತು

13-11-rama-eye
Published on

ರಾಮನಗರ : ನಲವತ್ತು ವರ್ಷದ ನಂತರ ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ನಿಗದಿತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅರ್ಕೇಶ್ವರ ಸೇವಾ ಸಂಘದ ಅಧ್ಯಕ್ಷ ಸಿ.ಎನ್. ವೆಂಕಟೇಶ್ ಕಿವಿಮಾತು ಹೇಳಿದರು.

ನಗರದ ಕೃಷ್ಣ ಸ್ಮತಿ ಕಲ್ಯಾಣ ಮಂಟಪದಲ್ಲಿ ದೃಷ್ಟಿ ಕಣ್ಣಿನ ಆಸ್ಪತ್ರೆ, ಅರ್ಕೇಶ್ವರ ಸೇವಾ ಸಂಘ, ಸ್ವಾಭಿಮಾನ ಸೇವಾ ಸಮಿತಿ ಮತ್ತು ಜೈ ಭಾರತ್ ವೀವರ್ಸ್‌ ಕೋ ಅಪರೇಟಿವ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಆಹಾರ ಪದ್ಧತಿಯಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂವತ್ತು ವರ್ಷ ದಾಟಿರುವ ಪ್ರತಿಯೊಬ್ಬರಲ್ಲಿಯೂ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ನೇತ್ರ ತಜ್ಞ ಡಾ. ಅನಿಲ್ ಕುಮಾರ್ ಮಾತನಾಡಿ, ಸಕ್ಕರೆ ಕಾಯಿಲೆ ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಂತೆ ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ಪ್ರತಿವರ್ಷ ನಿಗದಿತ ಸಮಯಕ್ಕೆ ಕಣ್ಣಿನ ತಪಾಸಣೆ ಮಾಡಿಕೊಂಡು ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಜೈ ಭಾರತ್ ವೀವರ್ಸ್‌ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ರಂಗರಾಜು ಮಾತನಾಡಿ, ಶಿಬಿರದಲ್ಲಿ 400ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, ಕೆಲವರಿಗೆ ಸ್ಥಳದಲ್ಲಿಯೇ ಎಸ್ಸಿಲಾರ್ ವಿಷನ್ ಫೌಂಡೇಷನ್ ವತಿಯಿಂದ ಕೆ.ವಿ. ಮಹೇಶ್ ಅವರು ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಅವಶ್ಯಕತೆಯಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಸ್ವಾಭಿಮಾನಿ ಸೇವಾ ಸಂಘದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಸಿದ್ದರಾಮು, ಸಲಹೆಗಾರ ಗವಿಯಪ್ಪ, ಆರ್.ಸಿ. ವಿಜಯ್‌ಕುಮಾರ್, ಸಮಾಜ ಸೇವಕ ಎ.ಎಸ್.ಕೃಷ್ಣಮೂರ್ತಿ, ಅರ್ಕೇಶ್ವರ ಸೇವಾ ಸಂಘದ ಕಾರ್ಯದರ್ಶಿ ಎಸ್.ಟಿ. ನಂದೀಶ್, ಖಜಾಂಚಿ ಕೆ.ಆರ್. ನಾಗೇಶ್, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net