ಮುಂದಿನ ವಾರ 40 ಪರ್ಸೆಂಟ್ ತನಿಖೆ ಆರಂಭ; ತನಿಖಾ ಚೌಕಷ್ಟು ಪರಿಷ್ಕರಣೆ ಸಾಧ್ಯತೆ!

Published on

ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಕಾಡಿದ್ದ 40 ಪರ್ಸೆಂಟ್ ಕಮೀಷನ್ ಆರೋಪವನ್ನು ತಾತ್ವಿಕವಾಗಿ ತುದಿಮುಟ್ಟಿಸಲು ಭಗೀರಥ ಪ್ರಯತ್ನ ನಡೆಸಿರುವ ಸಿದ್ದರಾಮಯ್ಯ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತನಿಖಾ ಆಯೋಗ ರಚಿಸಿ 25 ದಿನ ಕಳೆದಿದೆ. ಮುಂದಿನ ವಾರದಲ್ಲಿ ತನಿಖೆ ಆರಂಭವಾಗಲಿದ್ದು, ಈಗಾಗಲೇ ಈ ವಿಷಯದಲ್ಲಿ ಆರೋಪ ಮಾಡಿದವರು ಅಥವಾ ಇನ್ಯಾವುದೇ ದೂರುಗಳಿದ್ದರೆ ಅದನ್ನು ಪರಿಗಣಿಸಿ ತನಿಖೆ ಆರಂಭಿಸಲಾಗುತ್ತದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ಸರ್ಕಾರ ಈ ತನಿಖಾ ಆಯೋಗಕ್ಕೆ ಸರ್ಕಾರ ಒಂದು ಚೌಕಟ್ಟು ಹಾಕಿಕೊಟ್ಟಿತ್ತು. ಇದರಲ್ಲಿ ಕೆಲವು ಸ್ಪಷ್ಟತೆ ಇಲ್ಲವಾಗಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ತನಿಖಾ ಚೌಕಟ್ಟು ಪರಿಷ್ಕರಣೆಯಾಗುವ ಸಾಧ್ಯತೆಯೂ ಇದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ. ಹಾಗೆಯೇ, ತನಿಖಾ ಆಯೋಗಕ್ಕೆ ರೇಸ್‌ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಜಾಗ ಗುರುತಿಸಲಾಗಿತ್ತಾದರೂ ಅದನ್ನು ಬಳಸಿಕೊಳ್ಳವುದು ಕಷ್ಟಸಾಧ್ಯವಾದ್ದರಿಂದ ಬೇರೆಬೇರೆ ಕಡೆ ಹುಡುಕಾಟ ನಡೆಸಲಾಯಿತು. ಅಂತಿಮವಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಜಾಗ ಗುರುತಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಅಧಿಕಾರಿ, ಸಿಬ್ಬಂದಿ ನಿಯೋಜನೆ, ವಾಹನ, ಪೀಠೋಪಕರಣಗಳು, ದೂರವಾಣಿ ಇತ್ಯಾದಿ ಸೌಲಭ್ಯಗಳನ್ನು ಲೋಕೋಪಯೋಗಿ ಇಲಾಖೆ ಒದಗಿಸಲಿದೆ. ಬಳಿಕ ಚಟುವಟಿಕೆ ಆರಂಭವಾಗಲಿದೆ.

ಪ್ರಕರಣದ ಹಿನ್ನೆಲೆ

ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಅವರು ಪ್ರಧಾನಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಪ್ರಮುಖ ಕಾಮಗಾರಿ ನಡೆಸುವ ಇಲಾಖೆಗಳಲ್ಲಿ ನಡೆಯುತ್ತಿರುವ ಪ್ಯಾಕೇಜ್ ಪದ್ಧತಿ, ಬಾಕಿ ಮೊತ್ತದ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆ, ಇತ್ಯಾದಿಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಂಚಗುಳಿತನ, ಭ್ರಚ್ಟಾಚಾರ ನಡೆಯುತ್ತಿದೆ ವಿವರಿಸಿದ್ದರು.

ಈ ಮನವಿಗಳಲ್ಲಿ ಪ್ರಮುಖವಾಗಿ ಕಾಮಗಾರಿಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶ.25ರಿಂದ ಶೇ.30ರವರೆಗೆ ಕೆಲವು ಸಾರ್ವಜನಿಕ ಪ್ರತಿನಿಧಿಗಳಿಗೆ ಮತ್ತು ಇತರರಿಗೆ ಲಂಚ ನೀಡಬೇಕಾದ ಪರಿಸ್ಥಿತಿಯ ಬಗ್ಗೆ, ಕಾಮಗಾರಿಗಳು ಪೂರ್ಣವಾದ ನಂತರ ಬಾಕಿ ಬಿಲ್ಲುಗಳನ್ನು ತೀರುವಳಿ ಮಾಡಲು ಶೇ.5ರಿಂದ ಶೇ.6ರವರೆಗೆ ಎಲ್‌ಒಸಿ ಬಿಡುಗಡೆಗೆ, ಹೊರ ರಾಜ್ಯದ ಗುತ್ತಿಗೆದಾರರಿಗೆ ಪ್ಯಾಕೇಜ್ ಪದ್ಧತಿಯಿಂದ ಅನುಕೂಲ ಮಾಡಲಾಗುತ್ತಿರುವ ಬಗ್ಗೆ ಪ್ರಮುಖವಾಗಿ ಶೇ.40ರಷ್ಟು ಕಮೀಷನ್ ಕೇಳುತ್ತಿರುವ ಬಗ್ಗೆ ಸಾಧ್ಯಂತವಾಗಿ ಆರೋಪಿಸಿದ್ದರು.

ಸರ್ಕಾರ ಹೇಳಿದ್ದೇನು?

ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ನಡೆಸುವ ಇಲಾಖೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆಗಳಲ್ಲಿ ನಡೆಸುವ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು ಬಾಕಿ ಮೊತ್ತ ಬಿಡುಗಡೆ ಇತ್ಯಾದಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ದೂರುದಾರಾದ ಕೆಂಪಣ್ಣ ಅವರ ಆರೋಪದ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ಅಗತ್ಯ ಮನಗಂಡು ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು.

ಕಮೀಷ್ ಆ್ ಎನ್‌ಕ್ವೈರಿ ಆಕ್ಟ್ 1952ರ ನಿಯಮ 3 ಉಪ ನಿಯಮ 1ರ ಅನ್ವಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶದರಿಂದ ತನಿಖೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸಕಾರ ನಿರ್ಧರಿಸಿ ಸೆ.25ರಂದು ಆದೇಶ ಹೊರಡಿಸಿತ್ತು.

ಕಾಲಮಿತಿ ಮೂರು ತಿಂಗಳು

ಈ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕೆಂದು ಸರ್ಕಾರ ಅಪೇಕ್ಷಿಸಿದೆ. ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ, ಆಯೋಗವು ತನಿಖೆ ಪೂರ್ಣಗೊಳಿಸಲು, ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ಸಂಬಂಧ ಪಟ್ಟ ಇಲಾಖೆಗಳೂ ಸಹಕರಿಸಬೇಕೆಂದು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net