ಅಮೆರಿಕದಲ್ಲಿ 40 ಭಾರತೀಯರ ಮರಣ, ಭಾರತ ಮೂಲದ ಅಮೆರಿಕನ್ ಸೋಂಕಿತರ ಸಂಖ್ಯೆ 1,500

page 9 1
Published on

ವಾಷಿಂಗ್ಟನ್: ಕರೊನಾ ವೈರಸ್ ಸೋಂಕಿಗೆ ಅಮೆರಿಕದಲ್ಲಿ ಭಾರತ ಮೂಲದ ಕನಿಷ್ಠ 40 ಭಾರತೀಯ- ಅಮೆರಿಕನ್ನರು ಮೃತಪಟ್ಟಿದ್ದಾರೆ. ಸೋಂಕು ದೃಢಪಟ್ಟ ಭಾರತೀಯರ ಸಂಖ್ಯೆ 1,500 ದಾಟಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಕರೊನಾ ಹಾಟ್​ಸ್ಪಾಟ್ ಆಗಿದ್ದು ಈ ಎರಡು ಪ್ರದೇಶಗಳಲ್ಲಿ ಭಾರತ ಮೂಲದವರ ಸಂಖ್ಯೆಯೂ ಗಣನೀಯವಾಗಿದೆ.

ಅಮೆರಿಕದಲ್ಲಿ ಮೃತರಾದ ಭಾರತೀಯರ ಪೈಕಿ ಕೇರಳದ 17, ಗುಜರಾತ್​ನ 10, ಆಂಧ್ರ ಪ್ರದೇಶದ ಇಬ್ಬರು ಹಾಗೂ ಒಡಿಶಾದ ಒಬ್ಬರು ಸೇರಿದ್ದಾರೆ. ಅವರಲ್ಲಿ ಬಹುತೇಕರು 60 ವರ್ಷ ಮೇಲ್ಪಟ್ಟವರು. ಒಬ್ಬರು ಮಾತ್ರ 21 ವರ್ಷದ ಯುವಕ. ಕನಿಷ್ಠ 15 ಭಾರತ ಮೂಲದವರು ನ್ಯೂಯಾರ್ಕ್​ನಲ್ಲಿ ಸಾವಿಗೀಡಾಗಿದ್ದಾರೆನ್ನಲಾಗಿದೆ. ಅಮೆರಿಕದಲ್ಲಿ ಶುಕ್ರವಾರ ಒಂದೇ ದಿನ 2035 ಮಂದಿ ಮರಣಿಸಿದ್ದಾರೆ. ಮೃತರ ಒಟ್ಟು ಸಂಖ್ಯೆ 19,666ಕ್ಕೆ ತಲುಪಿದ್ದು, 5,06,008 ಜನ ಸೋಂಕು ಪೀಡಿತರಾಗಿದ್ದಾರೆ.

ಎಚ್1ಬಿ ವೀಸಾ ವಿಸ್ತರಣೆ ಪರಿಶೀಲನೆ: ಎಚ್1ಬಿ ವೀಸಾ ಸಹಿತ ಅಮೆರಿಕದಲಿರುವ ಭಾರತೀಯರ ವೀಸಾ ಅವಧಿ ವಿಸ್ತರಿಸಬೇಕೆಂಬ ಭಾರತದ ಮನವಿಯನ್ನು ಅಮೆರಿಕದ ವಿದೇಶಾಂಗ ಇಲಾಖೆ, ಆಂತರಿಕ ಭದ್ರತಾ ಇಲಾಖೆ ಶಿಫಾರಸು ಮಾಡಿದೆ. ಕರೊನಾ ವೈರಸ್​ನಿಂದ ತಲ್ಲಣವು ಉದ್ಯೋಗ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಲಿದೆ. ಎಚ್1ಬಿ ವೀಸಾ ಹೊಂದಿರುವ ಬಹುತೇಕ ಉದ್ಯೋಗಿಗಳು ನೌಕರಿ ಕಳೆದುಕೊಂಡಿದ್ದಾರೆ. ಅಮೆರಿಕದಲ್ಲೇ ಉಳಿಯಬೇಕಾದರೆೆ 60 ದಿನದೊಳಗೆ ಬೇರೆ ಕೆಲಸ ಹುಡುಕಿಕೊಳ್ಳುವುದು ಅನಿವಾರ್ಯ. ಹೀಗಾಗಿ ಈ ವೀಸಾ ಅವಧಿಯನ್ನು ಮುಂದುವರಿಸುವಂತೆ ಭಾರತ ಕೋರಿದೆ. ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್, ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಸ್ಟೀಫನ್​ರೊಂದಿಗೆ ರ್ಚಚಿಸಿದ್ದಾರೆ.

ನಿರ್ಬಂಧ ಹೇರಿದ ಟ್ರಂಪ್: ಅಮೆರಿಕದಲ್ಲಿ ನೆಲೆಸಿರುವ ವಿದೇಶಿಯರನ್ನು ಆಯಾ ದೇಶಗಳಿಗೆ ವಾಪಸ್ ಕಳಿಸಲು ಸರ್ಕಾರ ನಿರ್ಧರಿಸಿದ್ದು, ವಾಪಸ್ ಬರುವ ತಮ್ಮ ನಾಗರಿಕರಿಗೆ ಪ್ರವೇಶಾವಕಾಶ ನೀಡದ ದೇಶಗಳ ಮೇಲೆ ವೀಸಾ ನಿರ್ಬಂಧ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಕರೊನಾ ಸಾಂಕ್ರಾಮಿಕ ರೋಗ ಉಲ್ಬಣಿಸಿರುವ ಕಾರಣ ಆರೋಗ್ಯಕ್ಕೆ ಅಪಾಯವೆಂದು ಪರಿಗಣಿಸಲಾಗುವ ತಮ್ಮ ಪ್ರಜೆಗಳನ್ನು ವಾಪಸ್ ಪಡೆಯಲು ನಿರಾಕರಿಸುವ ಅಥವಾ ಅನಗತ್ಯ ವಿಳಂಬ ಮಾಡುವ ದೇಶಗಳ ಮೇಲೆ ವೀಸಾ ನಿರ್ಬಂಧ ವಿಧಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್​ಗೆ ಕರೊನಾ ಲಸಿಕೆ ಸಿದ್ಧ: ಸೆಪ್ಟೆಂಬರ್ ವೇಳೆಗೆ ಕರೊನಾ ವೈರಸ್​ಗೆ ಲಸಿಕೆ ಸಿದ್ಧಪಡಿಸುವು ದಾಗಿ ಬ್ರಿಟನ್​ನ ಆಕ್ಸ್​ಫರ್ಡ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. ವಿವಿಯ ಪ್ರಾಧ್ಯಾಪಕಿ ಸಾರಾ ಗಿಲ್ಬರ್ಟ್ ನೇತೃತ್ವದ ತಂಡ ಲಸಿಕೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದು, ಮುಂದಿನ ಕೆಲ ವಾರದಲ್ಲಿ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುವುದು ಎಂದು ತಿಳಿಸಿದೆ.

ದೇಶಾದ್ಯಂತ 8 ಸಾವಿರಕ್ಕೇರಿಕೆ

ಭಾರತದಾದ್ಯಂತ ಕಳೆದ 24 ತಾಸಿನಲ್ಲಿ ಹೊಸದಾಗಿ 629 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 8,228ಕ್ಕೆ ಏರಿಕೆಯಾಗಿದೆ. ಜತೆಗೆ 12 ಹೊಸ ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದು, ಮೃತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಸದ್ಯ 7,074 ಪ್ರಕರಣಗಳು ಸಕ್ರಿಯವಾಗಿವೆ, ಈವರೆಗೆ 896 ಜನರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮೃತರ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 2 ಸಾವಿರ ಗಡಿ ಮುಟ್ಟುವ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net