ಹತ್ತು ವರ್ಷದಲ್ಲಿ 40 ಚಂಡಮಾರುತ!; ರೈತರಿಗೆ ಸೈಕ್ಲೋನ್ ಕಂಟಕ, ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲೇ ಹೆಚ್ಚು..

State 2
ಕೋಲಾರ ತಾಲೂಕಿನ ಕ್ಯಾಲನೂರು ಗ್ರಾ.ಪಂ ವ್ಯಾಪ್ತಿಯ ತಿಪ್ಪೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಗುರುವಾರ ಮಧ್ಯಾಹ್ನ ಕುಸಿದಿದೆ. ಬೆಳಗ್ಗೆ 12 ಗಂಟೆಗೆ ಮಕ್ಕಳು ಶಾಲೆಯಿಂದ ಮನೆಗೆ ತೆರಳಿದ್ದರು.
Published on

| ಹರೀಶ್ ಬೇಲೂರು ಬೆಂಗಳೂರು

ರಾಜ್ಯದಲ್ಲಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸಂಭವಿಸುವ ಸೈಕ್ಲೋನ್ ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿಸುತ್ತಿದೆ. ಜೂನ್​ನಲ್ಲಿ ಮುಂಗಾರು ಸಂದರ್ಭದಲ್ಲಿ ಬಿತ್ತನೆ ಮಾಡುವ ರೈತರು ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಒಕ್ಕಣೆ ಶುರು ಮಾಡುತ್ತಾರೆ. ಆದರೆ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ಸಂಭವಿಸುವ ಸೈಕ್ಲೋನ್​ನಿಂದ ಶೇ.70 ಬೆಳೆಗಳು ನೀರುಪಾಲಾಗುತ್ತಿವೆ.

40 ಬಾರಿ ಸೈಕ್ಲೋನ್: 2011ರಿಂದ 2020ರವರೆಗೆ 40 ಬಾರಿ ಸೈಕ್ಲೋನ್ ಆಗಿದೆ. 2019ರಲ್ಲಿ ಅತಿ ಹೆಚ್ಚು 8 ಬಾರಿ ಸೈಕ್ಲೋನ್ ರೂಪುಗೊಂಡಿದೆ. 2011 ಮತ್ತು 2012ರಲ್ಲಿ ತಲಾ 2 ಬಾರಿ, 2013ರಲ್ಲಿ 5 ಬಾರಿ, 2014ರಲ್ಲಿ 3 ಬಾರಿ, 2015ರಲ್ಲಿ 4 ಬಾರಿ, 2016ರಲ್ಲಿ 4 ಬಾರಿ, 2017ರಲ್ಲಿ 3 ಬಾರಿ ಹಾಗೂ 2020ರಲ್ಲಿ 2 ಬಾರಿ ಸೈಕ್ಲೋನ್ ಸಂಭವಿಸಿದೆ.

ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ಹಿಂಗಾರು ಮಳೆ ಸುರಿಯುತ್ತದೆ. ಈಶಾನ್ಯ ಮಾರುತಗಳು ದಕ್ಷಿಣ ರಾಜ್ಯಗಳಲ್ಲಿ ಪ್ರಧಾನ ಮಳೆಗಾಲವಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತಮಿಳುನಾಡು, ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ. ತಮಿಳುನಾಡಿಗೆ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.48 ಹಿಂಗಾರಿನಲ್ಲೇ ಸುರಿಯುತ್ತದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲೂ ವಾರ್ಷಿಕ ಮಳೆಯಲ್ಲಿ ಶೇ.30-ಶೇ.40 ಹಿಂಗಾರಿನಲ್ಲೇ ಸುರಿಯುತ್ತದೆ.

ಫೆಸಿಫಿಕ್ ಸಾಗರದಿಂದ ಬಂಗಾಳಕೊಲ್ಲಿಯತ್ತ ಬೀಸುವ ಗಾಳಿಗೆ ಯಾವುದೇ ಅಡ್ಡ ಬರುವುದಿಲ್ಲ. ಅರಬ್ಬಿ ಸಮುದ್ರಕ್ಕೆ ಹೋಲಿಸಿದರೆ ಬಂಗಾಳಕೊಲ್ಲಿಯಲ್ಲಿ ಉಷ್ಣಾಂಶ ಜಾಸ್ತಿ ಇದೆ. ಅಲ್ಲದೆ, ಬ್ರಹ್ಮಪುತ್ರ, ಗಂಗಾ ನದಿಗಳ ನೀರು ಬಂಗಾಳಕೊಲ್ಲಿಗೆ ಸೇರುತ್ತದೆ. ಇದರಿಂದ ಬಂಗಾಳಕೊಲ್ಲಿಯಲ್ಲಿ ತಣ್ಣ ಮತ್ತು ಬಿಸಿ ನೀರು ಮಿಶ್ರಣವಾಗುತ್ತದೆ. ಈ ಎಲ್ಲ ಕಾರಣಗಳು ಸೈಕ್ಲೋನ್ ರೂಪುಗೊಳ್ಳುವುದಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ಹಾಗಾಗಿ, ಬಂಗಾಳಕೊಲ್ಲಿಯಲ್ಲಿ ಹೆಚ್ಚು ಸೈಕ್ಲೋನ್ ಉಂಟಾಗುತ್ತದೆ.

| ಡಾ.ಶ್ರೀನಿವಾಸ ರೆಡ್ಡಿ ಹವಾಮಾನ ತಜ್ಞ

  • ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಹೋಬಳಿಯ ಎ-ಕೊತ್ತೂರು ಗ್ರಾಮದಲ್ಲಿ ಗುರುವಾರ ಸಂಜೆ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಮರಾವತಿ (65) ಮೃತರು.
  • ಗೌರಿಬಿದನೂರಿನ ಐತಿಹಾಸಿಕ ಕ್ಷೇತ್ರ ಮುದುಗಾನ ಗುಂಟೆಯ ಶ್ರೀ ಗಂಗಾ ಭಾಗೀರಥಿ ದೇವಾಲಯದ ಎರಡು ದಶಕಗಳ ನಂತರ ಜಲಾವೃತಗೊಂಡಿದೆ.
  • ಹರಿಹರ ತಾಲೂಕಿನಲ್ಲಿ ಕಳೆದೆರಡು ದಿನದಿಂ ಸುರಿದ ಭಾರಿ ಮಳೆಗೆ 1,500 ಕ್ಕೂ ಅಧಿಕ ಎಕರೆ ಭತ್ತ ಬೆಳೆ ನೆಲಕಚ್ಚಿದ್ದು, 80 ಲಕ್ಷ ರೂ. ನಷ್ಟವಾಗಿದೆ.
  • ಹಾವೇರಿ ಜಿಲ್ಲೆಯಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 1700 ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಭಾರಿ ಮಳೆಯಿಂದ ಬೆಳೆ ನಷ್ಟವಾಗಿದೆ.
  • ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಬೆಟ್ಟದ ನಂದಿ ರಸ್ತೆಯಲ್ಲಿ ಕುಸಿತ ಮರುಕಳಿಸುತ್ತಲೇ ಇದ್ದು, ಗುರುವಾರ ಮುಂಜಾನೆಯೂ ದೊಡ್ಡ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ.

ಇಂದು ಸಿಎಂ ಸಭೆ: ರಾಜ್ಯದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ವಿಡಿಯೋ ಸಂವಾದ ನಡೆಸುವ ಅವರು ತುರ್ತು ಪರಿಹಾರ ಬಿಡುಗಡೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಳೆ ಇನ್ನೂ ಮುಂದುವರಿಯುವ ಲಕ್ಷಣ ಇರುವ ಕಡೆ ಅಪಾಯದ ಪರಿಸ್ಥಿತಿ ಎದುರಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಬಿಡá-ಗಡೆಗೆ ರಾಜ್ಯ ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅನá-ಮತಿ ಸಿಕ್ಕತೆ ತಕ್ಷಣ ಬಿಡá-ಗಡೆ ಮಾಡಲಾಗá-ವುದು. ರಾಜ್ಯದಲ್ಲಿ 1.51 ಲಕ್ಷ ರೈತರ ಬೆಳೆ ನಷ್ಟವಾಗಿದೆ. ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗೆ ನೆರವು ಬಿಡá-ಗಡೆ ಮಾಡಬೇಕು ಎಂದು ಜಿಲ್ಲಾಡಳಿತಗಳಿಂದ ಪ್ರಸ್ತಾವನೆ ಬಂದಿವೆ.

| ಆರ್.ಅಶೋಕ್ ಕಂದಾಯ ಸಚಿವ

ಅಡಕೆ ಮತ್ತು ಕಾಫಿ ಬೆಳೆಗಾರರು ಅತಿವೃಷ್ಟಿಯಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಿ ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಚಳಿಗಾಲದ ಅಧಿವೇಶನದಲ್ಲಿ ಮನವಿ ಸಲ್ಲಿಸಲಾಗುವುದು.

| ಡಿ.ವಿ.ಸದಾನಂದ ಗೌಡ ಸಂಸದ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಎಲ್ಲೆಲ್ಲಿ ಬೆಳೆ ಹಾನಿಯಾಗಿದೆ ಎಂಬುದರ ಸಂಪೂರ್ಣ ಸಮೀಕ್ಷೆ ಕೈಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೆಳೆಹಾನಿಗೆ ಎನ್​ಡಿಆರ್​ಎಫ್​ನಿಂದ ಪರಿಹಾರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

| ಬಿ.ಸಿ. ಪಾಟೀಲ ಕೃಷಿ ಸಚಿವ

ತೊಗರಿಗೆ ಕಾಡುತ್ತಿದೆ ಸೊರಗು ರೋಗ

ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ತೊಗರಿ ಬೆಳೆಗೆ ‘ಸೊರಗು’ ರೋಗ ಕಾಣಿಸಿಕೊಂಡಿದ್ದು, ಸಾವಿರಾರು ಹೆಕ್ಟೇರ್ ಬೆಳೆೆ ನಷ್ಟದ ಭೀತಿ ಕಾಡುತ್ತಿದೆ. ಈ ಬಾರಿ ಮುಂಗಾರು ಉತ್ತಮವಾಗಿದ್ದ ಕಾರಣದಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿರುವ ತೊಗರಿ ಬೆಳೆ ಉತ್ತಮವಾಗಿ ಬೆಳೆದಿದೆ. ಆದರೆ, ಕಾಯಿ ಬಿಡುವ ಹಂತದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಸೊರಗು ರೋಗ ಹೆಚ್ಚಾಗುತ್ತಿದೆ. ಕೂಡಲೆ ರೋಗಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸುವ ಮೂಲಕ ಉಳಿದ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು. ಜತೆಗೆ, ಡೈಥೇನ್ ಎಂ-45 ಅಥವಾ ಮೆಟಲಾಕ್ಸಿಲ್ ಎಂ 4% ಮತ್ತು ಮ್ಯಾಂಕೋಜೆಬ್ 64% ಶಿಲೀಂದ್ರ ನಾಶಕವನ್ನು ಗಿಡದ ಬುಡಕ್ಕೆ ಹಾಕಬೇಕು ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ವಿಜ್ಞಾನಿಗಳು ತಿಳಿಸಿದ್ದಾರೆ.

ಶಾಲೆಗಳಿಗೆ ರಜೆ- ಡಿಸಿಗೆ ಅಧಿಕಾರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಪರಿಸ್ಥಿತಿ ಆಧಾರಿಸಿ ಸ್ಥಳೀಯ ಶಾಲೆಗಳಿಗೆ ರಜೆ ಘೊಷಿಸುವ ನಿರ್ಧಾರವನ್ನು ಸರ್ಕಾರ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿದೆ. ಇದರ ಬೆನ್ನಲ್ಲೇ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಲೆಗಳಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ರಜೆ ನೀಡಿದ್ದಾರೆ.

20ರ ಬಳಿಕ ಮಳೆ ಕ್ಷೀಣ?

ಅರಬ್ಬಿ ಸಮುದ್ರಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 2 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತದಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ. ನ.20ರಿಂದ ಬೆಂಗಳೂರು ಸೇರಿ ಇತರೆ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸುವ ಸಾಧ್ಯತೆಯಿದೆ.

ಉಸ್ತುವಾರಿ ಮರೆತ ಸಚಿವರು

ಬೆಂಗಳೂರು: ರಾಜ್ಯಾದ್ಯಂತ ಎರಡು ತಿಂಗಳಿಗೂ ಹೆಚ್ಚು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಜಿಲ್ಲೆಗಳಲ್ಲಿ ಬೀಡುಬಿಟ್ಟು ಸಂತ್ರಸ್ಥರಿಗೆ ಪರಿಹಾರ ಉಸ್ತುವಾರಿ ನೋಡಿಕೊಳ್ಳಬೇಕಾದ ಸಚಿವರು ಎಲ್ಲಿ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ನೂರಾರು ಮನೆಗಳು ಬಿದ್ದು ಹೋಗಿವೆ. ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಆದರೆ ಸರ್ಕಾರಕ್ಕೆ ಮಾತ್ರ ಇದಾವುದರ ಪರಿವೆ ಇಲ್ಲದಂತಹ ಸ್ಥಿತಿ ನಿರ್ವಣವಾಗಿದೆ. ಯಾವುದೇ ಜಿಲ್ಲೆಯಲ್ಲಿ ಇನ್ನೂ ಪರಿಹಾರ ಕೇಂದ್ರಗಳು ಆರಂಭವಾಗಿಲ್ಲ. ನಷ್ಟದ ಅಂದಾಜು ಮಾಡುವ ಪ್ರಾಥಮಿಕ ಕಾರ್ಯ ಸಹ ನಡೆದಿಲ್ಲ. ಜಿಲ್ಲೆಗಳಲ್ಲಿದ್ದು ಅಧಿಕಾರಿಗಳ ಜತೆ ಸಮನ್ವಯ ಸಾಧಿಸಬೇಕಾದ ಸಚಿವರಲ್ಲಿ ಬಹುತೇಕರು ಉಸ್ತುವಾರಿಯನ್ನೇ ಮರೆತು ಬಿಟ್ಟಿದ್ದಾರೆ.

ಸುನಿಲ್ ತಂದೆ ಆತ್ಮಹತ್ಯೆ: ಪತ್ರಕರ್ತ ದಿ. ಸುನಿಲ್ ಹೆಗ್ಗರವಳ್ಳಿ ಅವರ ತಂದೆ ಹೆಗ್ಗರವಳ್ಳಿ ನಂಜೇಗೌಡ (84) ಮೂಡಿಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತಿಯಾದ ಮಳೆಗೆ ಕಾಫಿ ಮತ್ತು ಭತ್ತದ ಬೆಳೆ ಹಾಳಾಗಿದ್ದು, ಕೃಷಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net