

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಪಾಕ್ ಪ್ರೇರಿತ, ಪ್ರಾಯೋಜಿತ ಉಗ್ರರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಭಾರತೀಯ ಸೇನಾ ಪಡೆ ಮತ್ತು ಪೊಲೀಸರು ಮುಂದುವರಿಸಿದ್ದಾರೆ. ಕುಲ್ಗಾಂವ್ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಉಗ್ರರು ರಕ್ಷಣಾ ಪಡೆ ಮೇಲೆ ದಾಳಿ ನಡೆಸಿ ಹತರಾಗಿದ್ದಾರೆ.
ಕಾಶ್ಮೀರ ಝೋನ್ ಪೊಲೀಸ್ ಟ್ವೀಟ್ ಮಾಡಿರುವ ಪ್ರಕಾರ, ಜಮ್ಮು-ಕಾಶ್ಮೀರದ ಕುಲ್ಗಾಂವ್ ಮತ್ತು ಅನಂತನಾಗ್ನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಈ ವೇಳೆ, ಕುಲ್ಗಾಂವ್ ಜಿಲ್ಲೆಯ ನಿಪೋರಾ ಪ್ರದೇಶದಲ್ಲಿ ಇಬ್ಬರು ಉಗ್ರರು ರಕ್ಷಣಾ ಪಡೆ ಮೇಲೆ ದಾಳಿ ನಡೆಸಿದ್ದರು. ರಕ್ಷಣಾ ಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ತಪ್ಪಿಸಿಕೊಳ್ಳು ಮುಂದಾಗಿದ್ದ ಆ ಇಬ್ಬರು ಉಗ್ರರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಇದೇ ರೀತಿ, ಅನಂತನಾಗ್ ಜಿಲ್ಲೆಯಲ್ಲೂ ಉಗ್ರ ನಿಗ್ರಹ ಕಾರ್ಯ ಮುಂದುವರಿದ ವೇಳೆ ಇಬ್ಬರು ಉಗ್ರರು ತಪ್ಪಿಸಿಕೊಳ್ಳುವ ಸಲುವಾಗಿ ರಕ್ಷಣಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ರಕ್ಷಣಾ ಪಡೆ ಸಿಬ್ಬಂದಿ ನಡೆಸಿದ ಪ್ರತಿದಾಳಿಗೆ ಆ ಇಬ್ಬರು ಉಗ್ರರು ಹತರಾಗಿದ್ದಾರೆ. ಎಎನ್ಐ ವರದಿ ಪ್ರಕಾರ, ಅನಂತನಾಗ್ ಜಿಲ್ಲೆಯ ಲಾಲ್ಲನ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.
ಈ ಎರಡೂ ಜಿಲ್ಲೆಗಳಲ್ಲಿ ಈಗ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಭಾರತೀಯ ಸೇನೆ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್) ಮತ್ತು ಸ್ಥಳೀಯ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)