ಗ್ಯಾರಂಟಿಯಿಂದ 4 ಕೋಟಿ 30 ಲಕ್ಷ ಫಲಾನುಭವಿಗಳಿಗೆ ಲಾಭ

RandeepSurjewala
Published on

ಬೆಂಗಳೂರು: ಪ್ರಸ್ತುತ ನಮ್ಮ ಪಕ್ಷದ ಐದನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದೇ ಡಿಸೆಂಬರ್ ಕೊನೆಯಲ್ಲಿ ನಿರುದ್ಯೋಗಿ ಪದವೀಧರ ಮತ್ತು ಐಟಿಐ ಪದವಿ ಪಡೆದವರು ಗೌರವ ಧನ ಪಡೆಯಲು ನೋಂದಣಿ ಪ್ರಕ್ರಿಯೆಯು ಪ್ರಾರಂಭ ಆಗಲಿದೆ. ನಮ್ಮ ಸರ್ಕಾರ ವಾಗ್ದಾನದಂತೆ ಜಾರಿಗೊಳಿಸಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರತಿ ದಿನ ಸುಮಾರು 60 ರಿಂದ 62 ಲಕ್ಷ ಮಹಿಳೆಯರು ಪ್ರಯಾಣಿಸುವ ಅವಕಾಶ ದೊರಕಿದೆ. ಇದುವರೆಗೆ 114. 54ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ತೆರಳಿದ್ದಾರೆ. ಅದರ ವೆಚ್ಚ 2700 ಕೋಟಿ ರೂ.ಗಳಾಗಿವೆ ಎಂದು ವಿವರಿಸಿದ್ದಾರೆ.

ಮಾಸಿಕ 200 ಯೂನಿಟ್‌ವರೆಗೆ ವಿದ್ಯುತ್ ಉಪಯೋಗಿಸಿದ ರಾಜ್ಯದ 1 ಕೋಟಿ 60 ಲಕ್ಷ ಕುಟುಂಬಗಳ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಜಮಾ ಮಾಡಲಾಗುತ್ತಿದ್ದು, 1 ಕೋಟಿ 16 ಲಕ್ಷ ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ 2300 ಕೋಟಿ ಹಣ ನೇರವಾಗಿ ಜಮಾ ಆಗುತ್ತಿದೆ, ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು 5 ಕೆಜಿ ಅಕ್ಕಿಯ ಬದಲಾಗಿ, ಪ್ರತಿ ಕೆಜಿಗೆ 34 ರೂ.ನಂತೆ ತಲಾ 170 ರೂ.ಗಳನ್ನು ಜಮಾ ಮಾಡಲಾಗುತ್ತಿದ್ದು, ಇದುವರೆಗೆ 3 ಕೋಟಿ 97 ಲಕ್ಷ ಕುಟುಂಬದ ಸದಸ್ಯರ ಖಾತೆಗಳಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು 656 ಕೋಟಿ ಹಣ ಜಮಾ ಆಗುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ವರ್ಷದಲ್ಲಿ ನಮ್ಮ ಎಲ್ಲ 5 ಗ್ಯಾರಂಟಿ ಯೋಜನೆಗಳಿಗೆ ಬೇಕಾದ 38 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಕಾಯ್ದಿರಿಸಿದೆ. ಮುಖ್ಯವಾಗಿ ಈ ನಾಲ್ಕೂ ಪ್ರಮುಖ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 4 ಕೋಟಿ 30 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net