4.96 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು

23 TKE 1(BAVIKERE)
Published on

ತರೀಕೆರೆ: ವೀರಾಪುರ ಹೊಸೂರು ಸೇರಿ ಇತರ ಗ್ರಾಮಗಳಲ್ಲಿನ ಜನ ಬೋರ್‌ವೆಲ್ ನೀರು ಕುಡಿದು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಬಾವಿಕೆರೆ ಸಮೀಪದ ಅರಸಿಕೆರೆ ಕಾಲನಿಯಲ್ಲಿ 951.98 ಕೋಟಿ ರೂ. ವೆಚ್ಚದಲ್ಲಿ ಕಡೂರು ತಾಲೂಕಿನ 434, ಚಿಕ್ಕಮಗಳೂರು ತಾಲೂಕಿನ 146 ಹಾಗೂ ತರೀಕೆರೆ ತಾಲೂಕಿನ 156 ಗ್ರಾಮಗಳ ಜತೆ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದ್ದು 4.96 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಮೂರೂ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಸಲುವಾಗಿ 60 ಓವರ್‌ಹೆಡ್ ಟ್ಯಾಂಕ್ ನಿರ್ಮಾಣದ ಜತೆ 4 ಕಡೆ ಪಂಪಿಂಗ್ ಸ್ಟೇಷನ್ ನಿರ್ಮಾಣಗೊಳ್ಳಲಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಯೋಜನೆಯ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು 5 ವರ್ಷ ನಿರ್ವಹಣೆ ಮಾಡಲಿದ್ದಾರೆ ಎಂದರು.

ಬಾವಿಕೆರೆ ಸಮೀಪದ ಅರಸಿಕೆರೆ ಕಾಲನಿ ಸಸ್ಯಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನಾನಾ ಕಾರಣಗಳಿಂದ ಅಡೆತಡೆ ಎದುರಾಗಿದ್ದು ಉದ್ದೇಶಿತ ಯೋಜನೆ ಎಲ್ಲವನ್ನು ಮೀರಿ ಪೂರ್ಣಗೊಳ್ಳಲಿದೆ. ಈ ಜಾಗದಲ್ಲಿ ನಿವೇಶನ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯವಾಗದಂತೆ ಬೇರೆಡೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಸದಸ್ಯ ಭರತ್ ಮಾತನಾಡಿ, ಬೇರೆಡೆ ಜಾಗವಿದ್ದರೂ, ಆಶ್ರಯ ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ಜಾಗಕ್ಕೆ ಬದಲಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದಲ್ಲಿ ಘಟಕ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಾರೂಕ್, ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ಗ್ರಾಪಂ ಉಪಾಧ್ಯಕ್ಷ ಭದ್ರಪ್ಪ, ಪ್ರಮುಖರಾದ ಎಚ್.ಎನ್.ಮಂಜುನಾಥ್, ಎನ್.ಜಿ.ರಮೇಶ್, ಶಿವಕುಮಾರ್, ವೆಂಕಟೇಶ್, ಮಹಾಬಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net